ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆ ನೀಡುವ 2025ನೇ ಸಾಲಿನ ‘ಬುಕ್ ಬ್ರಹ್ಮ ಸಾಹಿತ್ಯ ಪುರಸ್ಕಾರ’ಕ್ಕೆ ಮಲೆಯಾಳ ಲೇಖಕಿ ಕೆ.ಆರ್. ಮೀರಾ ಆಯ್ಕೆಯಾಗಿದ್ದಾರೆ.
ಈ ಪುರಸ್ಕಾರವು ₹2 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ವು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಗಸ್ಟ್ 8ರಿಂದ 10ರವರೆಗೆ ನಡೆಯಲಿದೆ. ಸಮಾರಂಭದ ಕೊನೆಯದಿನದಂದು ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ಪ್ರದಾನದ ಬಳಿಕ ಮೀರಾ ಅವರ ಜತೆಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಭಾರತೀಯ ಭಾಷಾ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೀಡುವ ಪುರಸ್ಕಾರ ಇದಾಗಿದೆ. ಕೋಟಯಂನ ಕೆ.ಆರ್. ಮೀರಾ ಅವರು ಕಥೆಗಾರ್ತಿ ಮತ್ತು ಪತ್ರಕರ್ತೆ. ಈವರೆಗೆ ಅವರು ಐದು ಕಥಾಸಂಕಲನಗಳು, ಎರಡು ನೀಳ್ಗತೆಗಳ ಸಂಕಲನ ಮತ್ತು ಐದು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ‘ಆರಚ್ಚಾರ್’ (ಆಂಗ್ಲ ಭಾಷೆಯಲ್ಲಿ ‘ಹ್ಯಾಂಗ್‌ವುಮನ್’) ಕಾದಂಬರಿ ಮಲೆಯಾಳ ಸಾಹಿತ್ಯದಲ್ಲಿ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.
ಈ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಲೇಖಕ ವಿವೇಕ್ ಶಾನಭಾಗ, ಅನುವಾದಕ ಸುಧಾಕರನ್ ರಾಮಂತಳ್ಳಿ ಹಾಗೂ ಬುಕ್ ಬ್ರಹ್ಮ ಸಾಹಿತ್ಯೋತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಇದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.