ADVERTISEMENT

ಕೆ.ಆರ್.ಪುರ: ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:56 IST
Last Updated 23 ಫೆಬ್ರುವರಿ 2019, 19:56 IST
ಕೆ.ಆರ್.ಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಯಿತು.
ಕೆ.ಆರ್.ಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ವಿದ್ಯಾರ್ಥಿಗಳ ಸಂದರ್ಶನ ನಡೆಯಿತು.   

ಕೆ.ಆರ್.ಪುರ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ನಡೆಯಿತು.

ಖಾಸಗಿ ಕಂಪನಿಗಳ ನಿಯೋಜಕರ ಸಂಯುಕ್ತ ಆಶ್ರಯದಲ್ಲಿ ಯುವಕ–ಯುವತಿಯರಿಗೆ ನೇರ ಸಂದರ್ಶನ ನಡೆಸಲಾಯಿತು. ನೂರಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಕೆಲಸ ನೀಡಲು ಸಮ್ಮತಿಸಿದವು. ತಾಂತ್ರಿಕ ತಾಂತ್ರಿಕೇತರ ಹುದ್ದೆಗಳಿಗೆ ಸ್ಥಳದಲ್ಲೇ ನೇರ ಆಯ್ಕೆ ನಡೆಯಿತು.

ಜಿಎಂಆರ್‌ ಫೌಂಡೇಷನ್, ಬಾಷ್ ಆಟೋಮೊಬೈಲ್ ಸರ್ವೀಸ್‌, ಅನಂತ್ ಕಾರ್ ಪ್ರೈವೇಟ್ ಲಿಮಿಟೆಡ್, ಯುರೇಕಾ ಫೊರ್ಬ್ಸ್‌ ಲಿಮಿಟೆಡ್, ಎಚ್‌ಡಿಎಫ್‌ಸಿ ಫೈನಾನ್ಸಿಯಲ್ ಸರ್ವೀಸ್, ವೈಟ್ ಹಾರ್ಸ್ ಮ್ಯಾನ್ ಪವರ್ ಪ್ರೈವೇಟ್ ಲಿಮಿಟೆಡ್, ಸಿಎಂಎಸ್ ಇನ್ಫೋ ಸಿಸ್ಟಮ್ ಲಿಮಿಟೆಡ್ ಸೇರಿದಂತೆ 200 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.

ADVERTISEMENT

ಮಹದೇವಪುರ, ಹೊಸಕೋಟೆ, ರಾಮಮೂರ್ತಿನಗರ, ಬಾಣಸವಾಡಿ, ಕಲ್ಯಾಣನಗರ, ಹೆಣ್ಣೂರು, ಸಿ.ವಿ. ರಾಮನ್ ನಗರ, ಸರ್ವಜ್ಞನಗರ, ಕನಕನಗರ, ಮಾರಗೊಂಡಹಳ್ಳಿ ವಿವಿಧ ಭಾಗಗಳಿಂದ ಬಂದಿದ್ದ ನಿರುದ್ಯೋಗಿ ಯುವಕ ಯುವತಿಯರು ತಮ್ಮ ವಿದ್ಯಾಭ್ಯಾಸದ ಮಾಹಿತಿಯನ್ನು ಖಾಸಗಿ ಕಂಪನಿಗಳಿಗೆ ವಿನಿಮಯ ಮಾಡಿಕೊಂಡು ಕೆಲಸ ಗಿಟ್ಟಿಸಿಕೊಂಡರು.

‘ಐಟಿಐ ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದ್ದೇನೆ. ಖಾಸಗಿ ಸಂಸ್ಥೆಗಳು ನಮ್ಮ ಭಾಗದಲ್ಲಿ ಉದ್ಯೋಗ ಮೇಳ ಮಾಡಿರುವುದರಿಂದ ನಮಗೆ ಅನುಕೂಲ ಆಗಿದೆ’ ಎಂದು ವಿದ್ಯಾರ್ಥಿನಿ ಸೌಮ್ಯಾ ಹೇಳಿದರು.

‘ಕೆ.ಆರ್.ಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದೇನೆ. ನಾಲ್ಕು ಖಾಸಗಿ ಸಂಸ್ಥೆಗಳು ಉದ್ಯೋಗ ನೀಡಲು ಮುಂದೆ ಬಂದಿವೆ. ನನಗೆ ಇಷ್ಟವಾದ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತೇನೆ’ ಎಂದು ವಿದ್ಯಾರ್ಥಿ ಮಂಜುನಾಥ್ ತಿಳಿಸಿದರು.

ಐಟಿಐ ಸಂಸ್ಥೆಯ ಸಿಎಂಡಿ ಕೆ.ಅಲಗೇಸನ್ ಉದ್ಯೋಗ ಮೇಳ ಉದ್ಘಾಟಿಸಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಟಿ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಐಟಿ, ಇಡಿ ನಿರ್ದೇಶಕ ಸನತ್ ಕುಮಾರ್, ಉದ್ಯೋಗ ಮಾಹಿತಿ ಅಧಿಕಾರಿ ವಿವೇಕ್ ಸರಿಕಾರ್, ಯುವ ರೆಡ್ ಕ್ರಾಸ್ ಸಂಚಾಲಕ ಡಾ.ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.