ADVERTISEMENT

ಕೆ.ಆರ್.ಪುರ | ಬಿದರಹಳ್ಳಿ- ಕಿತ್ತಗನೂರು ರಸ್ತೆ ಕೆಸರುಮಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 23:45 IST
Last Updated 8 ಸೆಪ್ಟೆಂಬರ್ 2025, 23:45 IST
ಬಿದರಹಳ್ಳಿ- ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಮಣ್ಣು ಸುರಿದ ಸಾರ್ವಜನಿಕರು
ಬಿದರಹಳ್ಳಿ- ಕಿತ್ತಗನೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಮಣ್ಣು ಸುರಿದ ಸಾರ್ವಜನಿಕರು   

ಕೆ.ಆರ್.ಪುರ: ಬಿದರಹಳ್ಳಿ– ಕಿತ್ತಗನೂರು ಮುಖ್ಯ ರಸ್ತೆ ಮಳೆಯಿಂದಾಗಿ ಕೆಸರು ಮಯವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. 

ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಪಡಿಸಿಲ್ಲ.  

ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಿತ್ತಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಹಳ್ಳಿಯಿಂದ ಕಿತ್ತಗನೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ನಿತ್ಯ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹಲವು ಬಾರಿ ಅಪಘಾತಗಳು ಸಂಭವಿಸಿರುವುದೂ ಉಂಟು.

ADVERTISEMENT

ಹದಗೆಟ್ಟ ರಸ್ತೆ ದುರಸ್ತಿ ಕಾಣದಿದ್ದಾಗ ಸುತ್ತಮುತ್ತಲಿನ ಜಮೀನು ಮಾಲೀಕರು ರಸ್ತೆಗೆ ಮಣ್ಣು ಸುರಿದಿದ್ದಾರೆ. ಹಾಗಾಗಿ ಪ್ರತಿ ಬಾರಿಯೂ ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತದೆ. 

‘ಮುಖ್ಯರಸ್ತೆಯಲ್ಲಿ ಕೆಲವೆಡೆ ಮಳೆ ನೀರು ನಿಲ್ಲುತ್ತಿತ್ತು. ಕೆಲ ಜಮೀನು ಮಾಲೀಕರು ಚೆನ್ನಾಗಿರುವ ರಸ್ತೆಗೆ  ಮಣ್ಣು ಸುರಿದ ಕಾರಣ ರಸ್ತೆ ಹಾಳಾಗಿ ಸಂಚಾರ ಮಾಡದಂತಾಗಿದೆ. ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳತ್ತ ಬೊಟ್ಟು ಮಾಡಿದ್ದಾರೆ’ ಎಂದು ಕಿತ್ತಗನೂರು ನಿವಾಸಿ ವಿ.ಪಿ.ಕೃಷ್ಣ ದೂರಿದರು.

‘ಮೂರು ತಿಂಗಳ ಹಿಂದೆ ಚೆನ್ನಾಗಿದ್ದ ರಸ್ತೆಗೆ ಕೆಲವರು ರಸ್ತೆಗೆ ಮಣ್ಣು ಸುರಿದು ಹೋಗಿದ್ದಾರೆ. ಈ ರಸ್ತೆಯ ಮೂಲಕ ಕಾಲೇಜಿಗೆ ಹೋಗುತ್ತೇವೆ. ಹಾಳಾದ ರಸ್ತೆಯಿಂದಾಗಿ 5 ಕಿಲೋ ಮೀಟರ್‌ ಸುತ್ತು ಹಾಕಿಕೊಂಡು ಅವಲಹಳ್ಳಿ ಮೂಲಕ ಕೆಲಸಕ್ಕೆ ಹೋಗಬೇಕಿದೆ’ ಎಂದು ದ್ವಾರಕ ಬಡಾವಣೆಯ ನಿವಾಸಿ ಮಲ್ಲಾ ಸುಧಾಕರ್ ಅಕ್ರೋಶ ವ್ಯಕ್ತಪಡಿಸಿದರು.

‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ರಸ್ತೆ ಮೂಲಕ ಹಾದು ಹೋಗಿರುವ ರಾಜಕಾಲುವೆಯನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ಮಳೆ ನೀರು ರಸ್ತೆ ಮೇಲೆ ನಿಲ್ಲುತ್ತದೆ. ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ’ ಸ್ಥಳೀಯ ನಿವಾಸಿ ಶಶಿಕಾಂತ್ ನಾಯಕ್ ದೂರಿದರು.

‘ಬಿದರಹಳ್ಳಿ- ಕಿತ್ತಗನೂರು ರಸ್ತೆ ಸಮಸ್ಯೆ ದೊಡ್ಡಗುಬ್ಬಿ ಹಾಗೂ ಕಿತ್ತಗನೂರು ಗ್ರಾಮ ಪಂಚಾಯಿತಿಗಳ ನಡುವಿನ ಸಮನ್ವಯದ ಕೊರತೆಯಿಂದ ಬಗೆಹರಿದಿಲ್ಲ. ಈ ರಸ್ತೆ ಮೂಲಕ ಶಾಲಾ, ಕಾಲೇಜಿಗೆ ತೆರಳಬೇಕು. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವ ಸಂದರ್ಭದಲ್ಲಿ ವಾಹನಗಳು ಗುಂಡಿಯಲ್ಲಿ ಸಿಲುಕಿರುವ ಉದಾಹರಣೆಯೂ ಇದೆ’ ಎಂದು ಸ್ಥಳೀಯ ನಿವಾಸಿ ಪ್ರಶಾಂತ್ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.