
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ವಿವಿಧ ಸ್ಟಾರ್ಟ್‌ಅಪ್ ಕಂಪೆನಿಗಳು ತಮ್ಮ ಕೃಷಿ ಆಧಾರಿತ ಮೌಲ್ಯರ್ಧಿತ ಉತ್ಪನ್ನಗಳನ್ನು ಮಾರಾಟಕ್ಕ ಇಡಲಾಗಿತ್ತು
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ವಿವಿಧ ವೃತ್ತಿಯಲ್ಲಿದ್ದ ಯುವಕ ಯುವತಿಯರು ನವೋದ್ಯಮದ ಅವಕಾಶಗಳನ್ನು ಬಳಸಿಕೊಂಡು ಕೃಷಿ ಉದ್ಯಮದತ್ತ ಹೊರಳಿದ್ದಾರೆ. ಗೃಹಿಣಿಯರೂ ಕೃಷಿ ಉತ್ಪನ್ನ ಆಹಾರೋದ್ಯಮದತ್ತ ಆಕರ್ಷಿತರಾಗಿದ್ದಾರೆ. ನಗರದ ಜಿಕೆವಿಕೆಯಲ್ಲಿ ಆರಂಭವಾದ ಕೃಷಿ ಮೇಳದಲ್ಲಿ ಇಂಥ ಸಾಧಕರ ಯಶೋಗಾಥೆಗಳು ಅನಾವರಣಗೊಂಡವು.
ಬೆಂಗಳೂರಿನ ಪೂಜಾ ಅವರು ಕನಕದಾಸರ ‘ರಾಮಧಾನ್ಯ ಚರಿತೆ’ಯಿಂದ ಆಕರ್ಷಿತರಾಗಿ ಅದೇ ಹೆಸರಲ್ಲಿ ವಿಭಿನ್ನ ಆಹಾರ ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಪ್ರಯೋಗ ಮಾಡಿದ್ದಾರೆ. ಹೆಚ್ಚಿನವು ‘ರೆಡಿ ಟು ಈಟ್’ ರೂಪದಲ್ಲಿಯೇ ಇವೆ. ಅವಲಕ್ಕಿ, ಉಪ್ಪಿಟ್ಟು, ಪೊಂಗಲ್ ಸಹಿತ ಬಗೆಬಗೆಯ ತಿಂಡಿಗಳನ್ನು ಸಿರಿಧಾನ್ಯ ಬಳಸಿಕೊಂಡು ತಯಾರಿಸಿದ್ದಾರೆ.
ಎಂಜಿನಿಯರ್ ಆಗಿದ್ದು ಲೋಕಸೇವಾ ಆಯೋಗದ ಪರೀಕ್ಷೆಗೂ ತಯಾರಿ ನಡೆಸುತ್ತಿರುವ ಪೂಜಾ, ‘ಹೊಸದೇನಾದರೂ ಮಾಡಬೇಕು ಎಂಬ ಉದ್ದೇಶದಿಂದ ಸ್ನೇಹಿತರು, ಮನೆಯವರ ಸಹಕಾರ ಪಡೆದು ಆಹಾರ ಸಂಸ್ಕರಣೆ ಉದ್ಯಮ ಆಯ್ಕೆ ಮಾಡಿಕೊಳ್ಳಬೇಕು ಅನಿಸಿತು. ಇದಕ್ಕೆ ಬೇಕಾದ ತಂತ್ರಜ್ಞಾನ, ಪ್ಯಾಕೇಜಿಂಗ್ ಬಗ್ಗೆ ತರಬೇತಿ ಪಡೆದು ಮೊದಲ ಬಾರಿಗೆ ರಾಮಧಾನ್ಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.
‘ಜನ ರುಚಿಕರ ಆಹಾರ ಬಯಸುವ ಜತೆಗೆ ತತ್‌ಕ್ಷಣಕ್ಕೆ ಬಳಸುವುದಕ್ಕೆ ಇಷ್ಟಪಡುತ್ತಾರೆ. ಅಂತಹ ಆಹಾರ ಪರಿಚಯಿಸಿದ್ದೇವೆ. ಪ್ರತಿಕ್ರಿಯೆ ನೋಡಿಕೊಂಡು ಹೊಸ ಉತ್ಪನ್ನ ಬಿಡುಗಡೆ ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು.
ಖಾಸಗಿ ಉದ್ಯೋಗಿಯಾಗಿದ್ದ ಉದಯ್ ಅವರು ನೇರಳೆ ಹಣ್ಣಿನ ವಿವಿಧ ಉತ್ಪನ್ನಗಳ ಘಟಕ ಆರಂಭಿಸಿ ಉತ್ಪಾದನೆ ಶುರು ಮಾಡಿದ್ಧಾರೆ. ನೇರಳೆ ಹಣ್ಣಿನ ಪೌಡರ್, ಜ್ಯೂಸ್, ಜಾಮ್, ಸ್ಟಿಪ್ಸ್ ಸಹಿತ ಏಳೆಂಟು ರೀತಿಯ ಆರೋಗ್ಯಪೂರ್ಣ ಉತ್ಪನ್ನಗಳನ್ನು ತಯಾರಿಸಿದ್ದಾರೆ.
‘ನೇರಳೆ ಹಣ್ಣು ಕಿತ್ತ ಬಳಿಕ ಎರಡು ಮೂರು ದಿನದಲ್ಲಿ ಹಾಳಾಗುತ್ತದೆ. ಅದನ್ನು ಸಂಸ್ಕರಣೆ ಮಾಡಿ ವಿವಿಧ ರೂಪದಲ್ಲಿ ನೀಡಿದರೆ ಜನ ಇಷ್ಟಪಡಬಲ್ಲರು ಎಂದು ಇದನ್ನು ಆರಂಭಿಸಿದ್ದೇವೆ’ ಎಂದು ಹೇಳಿದರು.
ವಿದೇಶದಲ್ಲಿ ಪತಿಯೊಂದಿಗೆ ಇದ್ದ ಗೃಹಿಣಿ ಸ್ಪಂದನಾ ಜಯಂತ್ ಬೆಂಗಳೂರಿಗೆ ಮರಳಿದ ಬಳಿಕ ‘ತ್ವಾರಿಷ್’ ಹೆಸರಿನ ಜೋಳ, ರಾಗಿ ಹಾಗೂ ಸಿರಿಧಾನ್ಯಗಳ ದೋಸೆ ಪೌಡರ್ ತಯಾರಿಸಿ ಮೊದಲ ಬಾರಿಗೆ ಕೃಷಿ ಮೇಳದಲ್ಲಿ ಪರಿಚಯಿಸಿದ್ದಾರೆ. ‘ಮನೆಯಲ್ಲಿ ಅಮ್ಮ ಮಾಡುತ್ತಿದ್ದ ಅಡುಗೆಯ ರುಚಿಯನ್ನು ಜನರಿಗೆ ನೀಡಬೇಕು ಎನ್ನುವ ಉದ್ದೇಶದಿಂದ ಇಂತಹ ಪ್ರಯೋಗ ಮಾಡಿದ್ದೇನೆ’ ಎಂದು ವಿವರಿಸಿದರು.
‘ನವೋದ್ಯಮ ಮಾಡಿ ಮೂರ್ನಾಲ್ಕು ರೀತಿಯ ದೋಸೆ ಹಿಟ್ಟನ್ನು ಹತ್ತು ದಿನದ ಹಿಂದೆ ಮಾರುಕಟ್ಟೆಗೆ ಪರಿಚಯಿಸಿದ್ದೆವು. ಇನ್ನಷ್ಟು ಹಿಟ್ಟುಗಳ ಉತ್ಪನ್ನಗಳ ಪ್ರಯೋಗವೂ ನಡೆದಿದೆ’ ಎಂದು ಸ್ಪಂದನಾ ತಿಳಿಸಿದರು.
ಜೇನು, ರಾಗಿ– ಜೋಳದ ಎಣ್ಣೆರಹಿತ ಬೋಟಿ, ಹಪ್ಪಳ, ಅಣಬೆಯಿಂದ ತಯಾರಿಸಿದ ಉಪ್ಪಿನಕಾಯಿ, ಬಿಸ್ಕೆಟ್, ಪೌಡರ್‌ಗಳು ಕೂಡ ನವೋದ್ಯಮದ ಅಡಿಯೇ ಆಹಾರೋತ್ಪನ್ನಗಳ ರೂಪ ಪಡೆದಿವೆ.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ವಿವಿಧ ಸ್ಟಾರ್ಟ್‌ಅಪ್ ಕಂಪೆನಿಗಳು ತಮ್ಮ ಕೃಷಿ ಆಧಾರಿತ ಮೌಲ್ಯರ್ಧಿತ ಉತ್ಪನ್ನಗಳನ್ನು ಮಾರಾಟಕ್ಕ ಇಡಲಾಗಿತ್ತು
ಕರ್ನಾಟಕ ರಾಜ್ಯ ಮೀನಿನ ಲಾಲಿತ್ಯ
ಕೃಷಿ ಮೇಳದಲ್ಲಿ ಆಕರ್ಷಿಸುತ್ತಿರುವುದು ದಶಕದ ನಂತರ ಆರಂಭಿಸಿರುವ ಮತ್ಸ್ಯಮೇಳ. ಇಲ್ಲಿ 45 ಬಗೆಯ ಆಲಂಕಾರಿಕ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅದರಲ್ಲಿ ‘ಕರ್ನಾಟಕ ರಾಜ್ಯ ಮೀನು’ ಸ್ಥಾನ ಪಡೆದಿರುವ ಹಾಲುಗೆಂಡೆ ಮೀನು ಗಮನ ಸೆಳೆಯುತ್ತಿದೆ.
‘ಮಹಷಿರ್ ಮೀನನ್ನೇ ಹೋಲುವ ಹಾಲುಗೆಂಡೆ ಮೀನು ಕಾವೇರಿ ನದಿಯಲ್ಲಿ ಹೆಚ್ಚು ಸಿಗುತ್ತದೆ. ಹಿಂದೆಯೇ ಇದನ್ನು ‘ರಾಜ್ಯ ಮೀನು’ ಎಂದು ಘೋಷಿಸಲಾಗಿದ್ದರೂ ಈ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಈ ಮಾಹಿತಿಯನ್ನು ಜನರಿಗೆ ನೀಡುತ್ತಿದ್ದೇವೆ’ ಎಂದು ಕೃಷಿ ವಿಶ್ವವಿದ್ಯಾಲಯದ ಒಳನಾಡು ಮೀನುಗಾರಿಕೆ ಘಟಕದ ಮುಖ್ಯಸ್ಥ ಹರ್ಷ ನಾಯಕ್ ತಿಳಿಸಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳದಲ್ಲಿ ಪ್ರದರ್ಶಸಿಲಾದ ಹಳ್ಳೀಕಾರ್ ಎತ್ತುಗಳು ಜನರ ಆಕರ್ಷಣೆಯ ಕೇಂದ್ರವಾಗಿತ್ತು
ತರಹೇವಾರಿ ಬಾಳೆ ತಳಿ
‘ಹಿಂದೆ 800ಕ್ಕೂ ಅಧಿಕ ಬಾಳೆ ತಳಿಗಳನ್ನು ನಮ್ಮಲ್ಲಿ ಬೆಳೆಯಲಾಗುತ್ತಿತ್ತು. ಈಗ ಬಹುತೇಕ ತಳಿಗಳು ಅಳಿದುಹೋಗಿದ್ದು 300 ತಳಿಗಳನ್ನು ದಕ್ಷಿಣ ಭಾರತದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ 100ರಷ್ಟು ಬಳಕೆಯಲ್ಲಿವೆ. ಕೃಷಿ ಮೇಳದಲ್ಲಿ ಬಾಳೆಯ ವೈವಿಧ್ಯಮಯ ಜಗತ್ತನ್ನು ನೋಡಿ ಖುಷಿಪಡಬಹುದು. 20 ಅಡಿ ಉದ್ದನೆಯ ಶಾಸ್ತ್ರಬಾಳೆ ಗಮನ ಸೆಳೆಯುತ್ತಿದೆ. ಬೂದುಬಾಳೆ ಕರ್ಪೂರವಲ್ಲಿ ಬಾಳೆ ಚಿರಾಪುಂಜಿ ನಮಸ್ತೆ ಬಾಳೆ ಚಂದ್ರಬಾಳೆ ರಸಥಾಳಿ ಆಟುಕೊಂಬಟ್ಟು ಫಿಂಗರ್ಸ್ ಬಾಳೆ ಪೂವನ ಬಾಳೆ ಅಲ್ಲಿವೆ.
‘ಸಹಜ ಸಮೃದ್ಧ ಸಂಸ್ಥೆಯು ಬಾಳೆ ತಳಿಗಳನ್ನು ಸಂಗ್ರಹಿಸಿ ಪ್ರದರ್ಶನ ಏರ್ಪಡಿಸುತ್ತಿದೆ. ಈಗಲೂ ಹಲವು ತಳಿಗಳ ಉತ್ಪಾದನೆ ಇದೆ. ಒಂದೊಂದು ಬಾಳೆಯ ರುಚಿ ಒಂದೊಂದು ರೀತಿ’ ಎಂದು ಸಂಸ್ಥೆಯ ಅಭಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.