ADVERTISEMENT

ಅದ್ದೂರಿ ಕೃಷಿ ಮೇಳಕ್ಕೆ ಸಂಭ್ರಮದ ತೆರೆ

ಕೃಷಿ ವಿವಿ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಹಸಿರು ಜಾತ್ರೆ l ಬರೋಬ್ಬರಿ 13 ಲಕ್ಷ ಜನರ ಭೇಟಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:01 IST
Last Updated 18 ನವೆಂಬರ್ 2018, 20:01 IST
1.ಕೃಷಿ ಮೇಳದಲ್ಲಿ ಅತ್ಯುತ್ತಮ ರೈತ ಪ್ರಶಸ್ತಿಗಳನ್ನು (ಎಡದಿಂದ) ಬಿ. ರಮೇಶ್ (ಡಾ.ಆರ್. ದ್ವಾರಕನಾಥ್ ಅತ್ಯುತ್ತಮ ರೈತ ಪ್ರಶಸ್ತಿ), ದುಂಡಪ್ಪ ಯಂಕಪ್ಪ ಹಳ್ಳಿ (ಸಿ.ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ), ಕೆ.ಆರ್. ಶ್ರೀನಿವಾಸ (ಡಾ.ಆರ್.ದ್ವಾರಕನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ), ರಮೇಶ್ (ರಾಜ್ಯಮಟ್ಟದ ಅತ್ಯುತ್ತಮ ಜೈವಿಕ ಇಂಧನ ಕೃಷಿಕ ಪ್ರಶಸ್ತಿ) ಮತ್ತು ಕೆ.ಎಸ್. ಮಂಜುನಾಥ್ (ರಾಜ್ಯಮಟ್ಟದ ಅತ್ಯುತ್ತಮ ಜೈವಿಕ ಇಂಧನ ಕೃಷಿಕ ಪ್ರಶಸ್ತಿ) ಯನ್ನು ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿ ಗೌರವಿಸಿದರು. ಸಚಿವ ಕೃಷ್ಣ ಭೈರೇಗೌಡ, ಲೋಕಸಭಾ ಸದಸ್ಯ ಎಂ.ವೀರಪ್ಪ ಮೊಯ್ಲಿ, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮತ್ತು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಇದ್ದಾರೆ  2.ಕೃಷಿ ಮೇಳದಲ್ಲಿ ಜಿಲ್ಲಾಮಟ್ಟದ ಪ್ರಗತಿಪರ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯನ್ನು (ಎಡದಿಂದ) ಕೆ.ವಿ.ಭಾರತಿ, ಬಿ.ಎಸ್.ಶಕುಂತಲಾ, ಪ್ರಮೋದ್ ಸಿ.ಗೌಡ ಮತ್ತು ಎಲ್.ರವೀಶ್ ಅವರಿಗೆ ನೀಡಿ ಗೌರವಿಸಲಾಯಿತು –ಪ್ರಜಾವಾಣಿ ಚಿತ್ರ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಬರೋಬ್ಬರಿ 13 ಲಕ್ಷ ಜನ ಭೇಟಿ ನೀಡಿದರು.

ಕೃಷಿ ಯಂತ್ರಗಳು, ನೀರಾವರಿ ಪರಿಕರ, ಸಸ್ಯ ವೈವಿಧ್ಯ, ಸಮಗ್ರ ಕೃಷಿ, ಪಶು, ಕೋಳಿ ಸಾಕಣೆ, ಕೃಷಿ–ಉದ್ಯಮ ಕ್ಷೇತ್ರಗಳ ಹೊಸ ಬೆಳವಣಿಗೆಗಳ ಕುರಿತು ಕುತೂಹಲಕರ ಮಾಹಿತಿ ವಿನಿಮಯ ಮೇಳದಲ್ಲಿ ನಡೆಯಿತು. ಆಹಾರ ರುಚಿಯ ವೈವಿಧ್ಯ ಜನರ ಬಾಯಿ ತಣಿಸಿತು. ವಿವಿ ಆವರಣದಲ್ಲಿ ಅಕ್ಷರಶಃ ರೈತರ– ಕೃಷಿ ಆಸಕ್ತರ ಜಾತ್ರೆಯೇ ನಡೆಯಿತು.

‘ಈ ಹಿಂದಿನ ವರ್ಷಗಳಲ್ಲಿ ಜನರು ಕೇವಲ ಮಳಿಗೆಗಳಿಗೆ ಭೇಟಿ ನೀಡಿ ವಾಪಸಾಗುತ್ತಿದ್ದರು. ಈ ಬಾರಿ ಬೆಳೆಯ ತಾಕುಗಳಿಗೆ ಭೇಟಿ ನೀಡಿ ಪ್ರತಿ ಬೆಳೆಯ ತಳಿ, ಕೃಷಿ ವಿಧಾನದ ಬಗ್ಗೆ ತಿಳಿದುಕೊಂಡಿದ್ದಾರೆ. ಗೋಷ್ಠಿಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದಾರೆ’ ಎಂದು ವಿವಿಯ ಮಾಹಿತಿ ಅಧಿಕಾರಿ ಶಿವರಾಮು ತಿಳಿಸಿದರು.

ADVERTISEMENT

ರೈತರ ಸಂಕಟಗಳಿಗೆ ಸಮಾಧಾನ, ಹೊಸ ಯೋಜನೆಗಳ ಪರಿಚಯ, ಒಂದಿಷ್ಟು ಭರವಸೆ ಮೂಡಿಸುವ ಕಾರ್ಯಕ್ರಮಗಳು ರೈತರಿಗೆ ಚೈತನ್ಯ ತುಂಬಲು ಯತ್ನಿಸಿದವು.

ಅಚ್ಚುಕಟ್ಟುತನ, ಮಳಿಗೆಗಳ ವೈವಿಧ್ಯ, ಮಾಹಿತಿಪೂರ್ಣ ಗೋಷ್ಠಿಗಳು, ಸಾಧಕ ರೈತರಿಗೆ ಸನ್ಮಾನ, ಗೀತ ಗಾಯನದ ರಂಜನೆ, ಕೃಷಿಯಲ್ಲಿ ಹೊಸ ಸಾಧ್ಯತೆಗಳ ಚಿಂತನೆ ಇತ್ಯಾದಿಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸಿದ ಮೇಳ ಭಾನುವಾರ ಸಂಪನ್ನಗೊಂಡಿತು. ಮೇಳದ ಮಳಿಗೆಗಳಲ್ಲಿ ಸುಮಾರು ₹ 5 ಕೋಟಿಯಷ್ಟು ವಹಿವಾಟು ನಡೆದಿದೆ.

ಸಮಾರೋಪ ಭಾಷಣ ಮಾಡಿದಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ಕೃಷಿಯಲ್ಲಿ ಬದಲಾವಣೆ ತರಬೇಕು. ಅದಕ್ಕೆ ರೈತರು ಮಾನಸಿಕವಾಗಿ ಸಿದ್ಧರಾಗಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು. ಮುಂದೆ ಪ್ರದೇಶವಾರು ಸರಾಸರಿ ಮಳೆ ಪ್ರಮಾಣ ಅಂದಾಜಿಸಿ ಅದಕ್ಕನುಗುಣವಾಗಿ ಏನು ಬೆಳೆಯಬೇಕು ಎಂಬ ಬಗ್ಗೆ ರೈತರಿಗೆ ಸಲಹೆ ನೀಡುವ ಕಾರ್ಯಕ್ರಮವೂ ಇದೆ. ಮಾರುಕಟ್ಟೆ ಸೃಷ್ಟಿ, ರಫ್ತು ಇತ್ಯಾದಿ ಸಂಬಂಧಿಸಿದಂತೆ ಪರಿವರ್ತನೆ ಆಗಬೇಕು. ರೈತ ಕೈಚಾಚುವಂತಾಗಬಾರದು. ಆತ ಬೇರೆಯವರಿಗೆ ಹಣ ಕೊಡುವಂತಾಗಬೇಕು’ ಎಂದರು.

ರೈತರಿಗೆ ವಿಮೆ ಜಾರಿ: ರಾಜ್ಯದಲ್ಲಿ ರೈತರಿಗೆ ವಿಮಾ ಸೌಲಭ್ಯ ಜಾರಿಗೆ ತರುವ ಚಿಂತನೆ ಇದೆ. ಬೆಳೆ ಸಮೀಕ್ಷೆ ಮಾಡಿಸಲಾಗುವುದು. ಶೂನ್ಯ ಬಂಡವಾಳದ ಕೃಷಿ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದರು.

ಪ್ರಯೋಗಾಲಯದಿಂದಾಚೆ ಬರಲಿ: ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ‘ಸಂಶೋಧನೆಗಳು ವಿಸ್ತರಣೆಗೊಳ್ಳಬೇಕು. ಅವು ವಿಶ್ವವಿದ್ಯಾಲಯಗಳಿಗಷ್ಟೇ ಸೀಮಿತವಾಗಬಾರದು. ಪ್ರಯೋಗಾಲಯದಿಂದ ಭೂಮಿಗೆ ಬರಬೇಕು. ಸಾಲ ಮನ್ನಾ ಸದಾ ಮಾಡಲಾಗದು. ರೈತ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು’ ಎಂದು ಹೇಳಿದರು

ಮಧ್ಯವರ್ತಿಗಳ ಕಾಟ ತಪ್ಪಿಸಿ: ಸಿಎಂಗೆ ಮೊರೆ

ಬೆಳೆಗಳ ಬಹುಪಾಲು ದರ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ರೈತ ಮಂಜುನಾಥ್‌ ಎಂಬುವವರು ಸಭೆಯಲ್ಲಿ ಮುಖ್ಯಮಂತ್ರಿ ಗಮನ ಸೆಳೆದರು.

ಅವರನ್ನು ತಮ್ಮತ್ತ ಕರೆದ ಕುಮಾರಸ್ವಾಮಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕೆನ್ನೆ ತಟ್ಟಿದರು. ಬಳಿಕ ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.