
ಯಲಹಂಕ: ‘ಮತ ಕಳ್ಳತನ ದೇಶದಾದ್ಯಂತ ನಡೆಯುತ್ತಿದ್ದು, ಇದರಲ್ಲಿ ಬಿಜೆಪಿ ಹಾಗೂ ಚುನಾವಣಾ ಆಯೋಗ ಶಾಮೀಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.
ಮತ ಕಳ್ಳತನದ ವಿರುದ್ಧ ಶನಿವಾರ ಸಹಕಾರನಗರದಲ್ಲಿರುವ ತಮ್ಮ ಗೃಹ ಕಚೇರಿಯಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಚುನಾವಣಾ ಆಯೋಗ ಬಿಜೆಪಿಯ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ. ಪರಿಣಾಮ ಇಡೀ ದೇಶದ ಚುನಾವಣಾ ಪ್ರಕ್ರಿಯೆಯೇ ಬುಡಮೇಲಾಗಿದೆ. ಚುನಾವಣಾ ವ್ಯವಸ್ಥೆಯಲ್ಲೇ ಅಕ್ರಮ ಎಸಗಿಬಿಟ್ಟರೆ ಬಿಜೆಪಿಯ ಗೆಲುವು ಸುಲಭ. ಹೀಗಾಗಿ ಚುನಾವಣಾ ಆಯೋಗ ಮತ್ತು ಬಿಜೆಪಿ ಜಂಟಿಯಾಗಿಯೇ ಈ ಅಕ್ರಮದಲ್ಲಿ ಶಾಮೀಲಾಗಿದೆ’ ಎಂದು ಕಿಡಿಕಾರಿದರು.
ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಅಕ್ರಮವಾಗದಂತೆ ನೋಡಿಕೊಳ್ಳುವುದು ಆಯೋಗದ ಮೊದಲ ಕರ್ತವ್ಯ. ಆದರೆ, ಕಲಬುರಗಿಯ ಆಳಂದ ಕ್ಷೇತ್ರದಿಂದ ಬೆಂಗಳೂರಿನ ಮಹದೇವಪುರ ಕ್ಷೇತ್ರದವರೆಗೆ ಮತದಾರರ ಪಟ್ಟಿಯಲ್ಲೇ ಚುನಾವಣಾ ಆಯೋಗ ಎಷ್ಟು ಅಕ್ರಮ ಎಸಗಿದೆ ಎಂಬ ವಿಚಾರ ಕಣ್ಣ ಮುಂದಿದೆ ಎಂದು ವಿಷಾದಿಸಿದರು.
ಮಹದೇವಪುರದಲ್ಲಿ 35 ಸಾವಿರ ಅಕ್ರಮ ಮತಗಳನ್ನು ಪಟ್ಟಿಗೆ ಸೇರಿಸಿದ್ದಾರೆ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಲಾಗಿದೆ. ಆಳಂದ ಕ್ಷೇತ್ರದಲ್ಲಿ 6 ಸಾವಿರ ನೈಜ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಅಕ್ರಮದ ಮಾಹಿತಿ ಸೂಕ್ತ ಸಮಯಕ್ಕೆ ಶಾಸಕ ಬಿ.ಆರ್.ಪಾಟೀಲ ಗಮನಕ್ಕೆ ಬಂದ ಕಾರಣಕ್ಕೆ ಇದನ್ನು ತಡೆಯಲಾಯಿತು. ಇಲ್ಲದಿದ್ದರೆ ಅಷ್ಟೂ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗುತ್ತಿತ್ತು. ಇದು ಚುನಾವಣೆಯೊಂದರ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಆಳಂದ ಕ್ಷೇತ್ರದಲ್ಲಿ ಸೈಬರ್ ಸೆಂಟರ್ ಬಳಸಿ ಹತ್ತಾರು ಫೋನ್ ನಂಬರ್ ಮೂಲಕ ಮತದಾರರ ಪಟ್ಟಿಯಿಂದ ಯಾರದ್ದೋ ಹೆಸರನ್ನು ತೆಗೆಯಲು ಇನ್ಯಾರದ್ದೋ ಹೆಸರಿನಿಂದ ಅರ್ಜಿ ಹಾಕಲಾಗಿದೆ. ಸುಮಾರು 70ಕ್ಕೂ ಹೆಚ್ಚು ನಕಲಿ ಫೋನ್ ನಂಬರ್‌ಗಳನ್ನು ಬಳಸಿರುವ ಮಾಹಿತಿ ಈಗಾಗಲೇ ತನಿಖೆಯಿಂದ ಹೊರಬಂದಿದೆ. ಈ ಸಂಖ್ಯೆಗಳು ಯಾರ ಹೆಸರಿನಲ್ಲಿ ಖರೀದಿಸಲಾಯಿತು? ಇವುಗಳ ಲೊಕೇಷನ್ ಎಲ್ಲಿದೆ? ಮತ ಕಳ್ಳತನಕ್ಕೆ ಬಳಸಿದ ಲ್ಯಾಪ್‌ಟಾಪ್‌ಗಳ ಐಪಿ ವಿಳಾಸದ ಮಾಹಿತಿ ಸೇರಿದಂತೆ ತನಿಖೆಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡಲು ಚುನಾವಣಾ ಆಯೋಗ ಹಿಂದೇಟು ಹಾಕುತ್ತಿರುವುದು ಏಕೆ? ಮತ ಕಳ್ಳತನ ಅಕ್ರಮದಲ್ಲಿ ಅವರೂ ಶಾಮೀಲಾಗಿರುವುದು ಸ್ಪಷ್ಟವಾಗುವುದಿಲ್ಲವೇ?’ ಎಂದರು.
ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ವಾಜಿದ್, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್.ಕೆ.ಮಹೇಶ್ ಕುಮಾರ್, ಟಿ.ಜಿ.ಚಂದ್ರು, ಕೆ.ಅಶೋಕನ್, ದಾನೇಗೌಡ, ವಿ.ವಿ.ಪಾರ್ತಿಬರಾಜನ್, ಪಿ.ವಿ.ಮಂಜುನಾಥ ಬಾಬು, ಆರ್.ಎಂ.ಶ್ರೀನಿವಾಸ್, ಡಿ.ಬಿ.ಸುರೇಶ್‌ಗೌಡ, ಶುಕೂರ್ ಅಹಮದ್‌ಖಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.