ಕೊಲೆಯಾದ ಕೃತಿ ಕುಮಾರಿ
ಬೆಂಗಳೂರು: ಕೋರಮಂಗಲದ ಭಾರ್ಗವಿ ಮಹಿಳಾ ಪೇಯಿಂಗ್ ಗೆಸ್ಟ್‌ಗೆ (ಪಿ.ಜಿ) ನುಗ್ಗಿ ಬಿಹಾರದ ಯುವತಿ ಕೃತಿ ಕುಮಾರ್ (24) ಅವರ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಶುಕ್ರವಾರ ತಡರಾತ್ರಿ ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.
ಮಧ್ಯಪ್ರದೇಶದ ಭೋಪಾಲ್‌ನ ನಿವಾಸಿ ಅಭಿಷೇಕ್ (24) ಬಂಧಿತ. ಜುಲೈ 23ರಂದು ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈತನ ಬಂಧನಕ್ಕೆ ಮೂರು ವಿಶೇಷ ತಂಡ ರಚಿಸಲಾಗಿತ್ತು. ಬೆಂಗಳೂರು ಸೇರಿ ವಿವಿಧ ರಾಜ್ಯಗಳಲ್ಲಿ ಹುಡುಕಾಟ ನಡೆಸಲಾಗಿತ್ತು.
ಆರೋಪಿಯ ಜಾಡು ಹಿಡಿದು ಮಧ್ಯಪ್ರದೇಶದ ಭೋಪಾಲ್‌ಗೆ ತೆರಳಿ ಆತನನ್ನು ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರು ಪಡಿಸಿ ಶನಿವಾರ ಸಂಜೆ ಬೆಂಗಳೂರಿಗೆ ಕರೆ ತಂದು ನ್ಯಾಯಾಧೀಶರ ಎದುರು ಹಾಜರುಪಡಿಸಿ 10 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ್ದ ಆರೋಪಿ, 3ನೇ ಮಹಡಿ ಕೊಠಡಿಯಲ್ಲಿದ್ದ ಯುವತಿಯ ಕತ್ತು ಸೀಳಿ ಕೊಲೆ ಮಾಡಿದ್ದ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದರು.
ಕೃತ್ಯದ ಬಳಿಕ ಮಾರ್ಗಮಧ್ಯೆ ರಕ್ತಸಿಕ್ತ ಬಟ್ಟೆ ಬದಲಾಯಿಸಿ, ಆಟೊದಲ್ಲಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಿ ರೈಲಿನಲ್ಲಿ ಮಧ್ಯಪ್ರದೇಶಕ್ಕೆ ತೆರಳಿದ್ದ. ತನ್ನ ಪೋಷಕರಿಗೆ ಯುವತಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಕೃತ್ಯ ನಡೆದ ಬಳಿಕ ಅಭಿಷೇಕ್ ಪ್ರೇಯಸಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ, ಮೊಬೈಲ್ ನೆಟ್‌ವರ್ಕ್ ಹಾಗೂ ಇತರೆ ತಾಂತ್ರಿಕ ಸಾಕ್ಷ್ಯ ಆಧರಿಸಿ ಆರೋಪಿ ಸುಳಿವು ಪತ್ತೆ ಮಾಡಲಾಯಿತು. ಮಧ್ಯಪ್ರದೇಶದ ಪೊಲೀಸರ ನೆರವು ಪಡೆದು ಆರೋಪಿ ಬಂಧಿಸಿ ನಗರಕ್ಕೆ ಕರೆ ತರಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.