ADVERTISEMENT

ಕೆಆರ್‌ಪಿಪಿ: ಮಹಿಳಾ ಘಟಕದ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 15:55 IST
Last Updated 17 ಡಿಸೆಂಬರ್ 2023, 15:55 IST
ನಗರದಲ್ಲಿ ಭಾನುವಾರ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನಗರದಲ್ಲಿ ಭಾನುವಾರ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.   

ಬೆಂಗಳೂರು: ‘ಸಭೆ–ಸಮಾರಂಭಗಳ ಮೂಲಕ ಪಕ್ಷದ ಸಂಘಟನೆ ಸಾಧ್ಯವಿಲ್ಲ. ಬೂತ್‌ಮಟ್ಟದಲ್ಲಿ ಕೆಲಸ ಮಾಡುತ್ತ ಜನರ ಸಮಸ್ಯೆಗೆ ಸ್ಪಂದಿಸುತ್ತಲೇ ಪಕ್ಷ ಸಂಘಟಿಸಬೇಕು’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮನೋಹರ್‌ ಗೌಡ ಕರೆ ನೀಡಿದರು.

ನಗರದಲ್ಲಿ ಭಾನುವಾರ ನಡೆದ ಪಕ್ಷದ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೆಆರ್‌ಪಿಪಿ ಸ್ಥಾಪನೆಯಾಗಿ ನಾಲ್ಕೈದು ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 15-20 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡಿದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ’ ಎಂದರು.

ADVERTISEMENT

ದಿನದ 24 ಗಂಟೆಯೂ ಕೆಲಸ ಮಾಡುತ್ತ ಪಕ್ಷದ ಅಧ್ಯಕ್ಷ ಜನಾರ್ದನ ರೆಡ್ಡಿ ಅವರ ಕನಸನ್ನು ನನಸು ಮಾಡಲು ಶ್ರಮಿಸೋಣ. ರಾಜ್ಯದಾದ್ಯಂತ ಪಕ್ಷ ಸಂಘಟನೆ ನಡೆಸೋಣ ಎಂದು ಹೇಳಿದರು.

ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ.ಸಿ. ಹೇಮಲತಾ ಮಾತನಾಡಿ, ‘ಬಸವಣ್ಣನವರ ಚಿಂತನೆಗಳು, ಅವರ ಆಶಯಗಳೇ ನಮ್ಮ ಪಕ್ಷದ ಬುನಾದಿ. ಸಮಾಜದ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಶಕ್ತಿ ನಮ್ಮ ಪಕ್ಷಕ್ಕಿದೆ’ ಎಂದು ಹೇಳಿದರು.

ಪಕ್ಷದ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ಮಂಗಳಾ, ಪದ್ಮಾ ರಾಜ್‌ಕುಮಾರ್, ಕವಿತಾ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿದ್ಯಾ, ಮೀನಾಕ್ಷಿ ಡಿ., ಆಯೇಷಾ ಭಾನು, ಆಶಿತಾ ಮತ್ತು ಶ್ರೀದೇವಿ ಅವರು ಅಧಿಕಾರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.