ADVERTISEMENT

ಎಲ್ಲ 97 ಲಕ್ಷ ಮನೆಗಳಿಗೆ ವರ್ಷದೊಳಗೆ ನಲ್ಲಿ ನೀರು: ಕೆ.ಎಸ್. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:24 IST
Last Updated 9 ಏಪ್ರಿಲ್ 2022, 20:24 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬೆಂಗಳೂರು: ‘ಮನೆ ಮನೆಗೆ ಗಂಗೆ ಯೋಜನೆ’ಯಡಿ ರಾಜ್ಯದಲ್ಲಿನ 97 ಲಕ್ಷ ಮನೆಗಳಿಗೆ ವರ್ಷದೊಳಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಈಶ್ವರಪ್ಪ, ‘ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಇದೇ 11ರಿಂದ ಒಂದು ವಾರ ಸಭೆ ನಡೆಸಲಿದ್ದಾರೆ. ಒಂದು ದಿನ ಎಲ್ಲ ರಾಜ್ಯ
ಗಳ ಸಚಿವರು, ಉಳಿದ ದಿನಗಳಲ್ಲಿ ಅಧಿಕಾ
ರಿಗಳು ಭಾಗವಹಿಸಲಿದ್ದಾರೆ’ ಎಂದರು.

‘ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಮನೆ ಮನೆಗೆ ಗಂಗೆ ಯೋಜನೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 3 ಸಾವಿರ ಗ್ರಾಮಗಳಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಸರಬರಾಜು ಆಗುತ್ತಿದೆ. ಕೇಂದ್ರ ₹ 3,325 ಕೋಟಿ, ರಾಜ್ಯ ಸರ್ಕಾರ ₹ 2,323 ಕೋಟಿ ಬಿಡುಗಡೆ ಮಾಡಿದೆ. 31 ಜಿಲ್ಲೆಗಳಲ್ಲಿ ಪ್ರಯೋಗಾಲಯ ಸ್ಥಾಪಿಸ
ಲಾಗಿದೆ’ ಎಂದರು.

ADVERTISEMENT

‘ನರೇಗಾ ಯೋಜನೆಯಲ್ಲಿ 32 ಲಕ್ಷ ಕುಟುಂಬಗಳು ಭಾಗಿಯಾಗಿದ್ದು, ಗುರಿ ಮೀರಿ ಸಾಧನೆಯಾಗಿದೆ. ಪರಿಶಿಷ್ಟ ಜಾತಿ- ಪಂಗಡದ 8.8 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಂಡಿವೆ. 6.97 ಕೋಟಿ ಮಾನವ ದಿನಗಳನ್ನು ಮಹಿಳೆಯರಿಗೆ ನೀಡಲಾಗಿದೆ. 22,441 ಅಂಗವಿಕಲರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದರು. ‘ಜಲಧಾರೆ ಯೋಜನೆ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿಯೂ ಉತ್ತಮ ಪ್ರಗತಿ ಸಾಧಿಸಲಾಗಿದೆ. ಕಸ ವಿಲೇವಾರಿ-ನಿರ್ಮೂಲನೆಗೆ ಜಿಲ್ಲೆಗೊಂದು ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ನರೇಗಾ, ಮನೆಮನೆಗೆ ಗಂಗೆ ಯೋಜನೆಗೆ ವೇಗ ನೀಡಲು ಇದೇ 28 ಮತ್ತು 29ರಂದು ಮಂಗಳೂರಿನಲ್ಲಿ ಎಲ್ಲ
ಸಿಇಒಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ಸ್ವಚ್ಛ ಭಾರತ್ ಯೋಜನೆಯಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯ ಕಟ್ಟಿಸಿಕೊಂಡಿದ್ದಾರೆ. ಆದರೆ, ಕೆಲವರಿಗೆ ರಾತ್ರಿ ತಂಬಿಗೆ ಹಿಡಿದು ಬಯಲಿನಲ್ಲಿ ಕುಳಿತರಷ್ಟೆ ತೃಪ್ತಿ. ಈ ಮನಸ್ಥಿತಿ ಬದಲಾಗಬೇಕು. ಈ ಕುರಿತು ಸ್ವಸಹಾಯ ಸಂಘಗಳಿಂದ ಜನಜಾಗೃತಿ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.