ADVERTISEMENT

ಕಾಲ್ತುಳಿತ: ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ, ಖಜಾಂಚಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 20:19 IST
Last Updated 11 ಜೂನ್ 2025, 20:19 IST
<div class="paragraphs"><p>ಆರ್‌ಸಿಬಿ ಸಂಭ್ರಮಾಚರಣೆ ಹಾಗೂ ‌ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಗಳು</p></div>

ಆರ್‌ಸಿಬಿ ಸಂಭ್ರಮಾಚರಣೆ ಹಾಗೂ ‌ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಚಿತ್ರಗಳು

   

ಕೃಪೆ: ಪಿಟಿಐ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಸಂಬಂಧ ಸಿಐಡಿ ಅಧಿಕಾರಿಗಳು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್‌ಸಿಎ) ಮಾಜಿ ಕಾರ್ಯದರ್ಶಿ ಎ.ಶಂಕರ್ ಹಾಗೂ ಮಾಜಿ ಖಜಾಂಚಿ ಜಯರಾಮ್‌ ಅವರನ್ನು ಬುಧವಾರ ವಿಚಾರಣೆಗೆ ಒಳಪಡಿಸಿದರು.‌

ADVERTISEMENT

ಸಿಐಡಿ ಕಚೇರಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಂದಿದ್ದ ಶಂಕರ್ ಮತ್ತು ಜಯರಾಮ್‌ ಅವರನ್ನು ಸಿಐಡಿ ಎಸ್‌ಪಿ ಶುಭನ್ವಿತಾ ನೇತೃತ್ವದ ತಂಡವು ವಿಚಾರಣೆಗೆ ಒಳಪಡಿಸಿತು. ರಾತ್ರಿ 7.30ರವರೆಗೂ ವಿಚಾರಣೆ ನಡೆಯಿತು ಎಂದು ಗೊತ್ತಾಗಿದೆ. 

‘ದುರಂತಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಪೊಲೀಸರಿಗೆ ಮೊದಲೇ ಮನವಿ ಮಾಡಲಾಗಿತ್ತು. ಆದರೆ, ಕಬ್ಬನ್‌ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್‌ ಅನುಮತಿ ನಿರಾಕರಿಸಿದ್ದರು. ಡಿಸಿಎಂ ಬರುತ್ತಾರೆ ಎಂದಾಗ ಭದ್ರತೆ ನೀಡಲಾಗಿತ್ತು. ಅಭಿಮಾನಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡುವುದಾಗಿ ನಾವು ಹೇಳಿಲ್ಲ. ಆರ್‌ಸಿಬಿಗೆ ಸಂಬಂಧಿಸಿದವರು ಹೇಳಿರುವ ಸಾಧ್ಯತೆ ಇದೆ ಎಂಬುದಾಗಿ ಶಂಕರ್ ಹಾಗೂ ಜಯರಾಮ್‌ ಹೇಳಿಕೆ ನೀಡಿದ್ದಾರೆ’ ಎಂದು ಗೊತ್ತಾಗಿದೆ.

ಅಮಾನತು ಆದೇಶ ಹಿಂಪಡೆಯಲು ವಾಲ್ಮೀಕಿ ಸಮಾಜದ ಆಗ್ರಹ

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಅವರನ್ನು ಅಮಾನತು ಮಾಡಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಕಾರ್ಯಾಧ್ಯಕ್ಷ ಎಂ.ನರಸಿಂಹಯ್ಯ, ‘ಎರಡು ವರ್ಷಗಳಿಂದ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಆಗಿ ಕಾರ್ಯನಿರ್ವಹಿಸಿದ್ದ ದಯಾನಂದ ಅವರನ್ನು ಕಾಲ್ತುಳಿತ ಪ್ರಕರಣದಲ್ಲಿ ಹರಕೆಯ ಕುರಿ ಮಾಡಲಾಗಿದೆ. ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಿರುವುದು ಖಂಡನೀಯ. ರಾಜ್ಯ ಸರ್ಕಾರ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಉದ್ದೇಶದಿಂದ ದಕ್ಷ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದೆ.
ಇದು ನಮ್ಮ ನಾಯಕ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ. ಕೂಡಲೇ ಅಮಾನತು ಆದೇಶವನ್ನು ಹಿಂಪಡೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.