ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ) ಸೇರಿಸಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಕೊಡಗಿನಲ್ಲಿ ಮಾತ್ರ ಕುರುಬ ಸಮುದಾಯ ಎಸ್.ಟಿ.ಗೆ ಸೇರಿದ್ದು, ಈ ವರ್ಗೀಕರಣವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿ, ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ನೀಡುವಂತೆ ಕೇಳುತ್ತಿಲ್ಲ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಗೊಂದಲದಲ್ಲಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನ ಸಹ ಕುರುಬ ಸಮುದಾಯ ತೀರಾ ಹಿಂದುಳಿದಿದೆ ಎಂದು ಹೇಳಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ರಾಜ್ಯ ಸರ್ಕಾರ ಕುರುಬ ಸಮುದಾಯವನ್ನು ಎಸ್.ಟಿಗೆ ಸೇರ್ಪಡೆ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ’ ಎಂದು ಸ್ಪಷ್ಟಪಡಿಸಿದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಕುರುಬರು ದೇಶದ ಮೂಲ ನಿವಾಸಿಗಳು ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ. ಮೂಲ ನಿವಾಸಿಗಳು ಎಂಬುದನ್ನು ಛಾಯಾಚಿತ್ರ ಸಮೇತ 1868ರಲ್ಲಿ ‘ಪೀಪಲ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ಪ್ರಕಟಿಸಿತ್ತು. ಈ ಗ್ರಂಥದ ಪ್ರಕಾರ ದಕ್ಷಿಣ ಭಾರತದ ಮೂಲ ಬುಡಕಟ್ಟು ನಿವಾಸಿಗಳಾದ ಕುರುಬರನ್ನು ಕನ್ನಡದಲ್ಲಿ ಕುರುಬ, ತಮಿಳಿನಲ್ಲಿ ಕುರುಂಬನ್, ಮಲೆಯಾಳ, ತುಳುವಿನಲ್ಲಿ ಕುರುಮನ್ ಎಂದು ಕರೆಯುತ್ತಾರೆ. 1961ರಲ್ಲಿ ಹೊರತಂದ ರಾಜ್ಯ ಗೆಜೆಟ್‌ನಲ್ಲಿ ಕರ್ನಾಟಕದಲ್ಲಿರುವ ಪ್ರಮುಖ ಗುಡ್ಡಗಾಡು, ಬುಡಕಟ್ಟು ಭಾಷೆಗಳಲ್ಲಿ ಕುರುಂಬ/ ಕುರುಬ ಭಾಷೆ ಮಾತನಾಡುವವರು 4,063 ಜನರಿದ್ದಾರೆ ಎಂಬುದಾಗಿ ದಾಖಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕೇಂದ್ರದ ಗಮನ ಸೆಳೆಯಲು ಅಕ್ಟೋಬರ್ 24ರಂದು ವಿಜಯಪುರದಲ್ಲಿ ಸಮುದಾಯದ ಪ್ರಮುಖರ ಸಭೆ ಕರೆಯಲಾಗಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಬೇರೆ ಸಮಾಜಗಳಿಗೆ ಅನ್ಯಾಯ ಮಾಡಿ, ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. ಸಮುದಾಯಕ್ಕೆ ಎಸ್.ಟಿ. ಸ್ಥಾನ ದೊರೆತರೆ, ಆಗ ಮೀಸಲಾತಿ ಪ್ರಮಾಣವನ್ನು ಶೇಕಡ 20ರವರೆಗೂ ನೀಡಲಿ’ ಎಂದು ಹೇಳಿದರು.
ಎಚ್. ವಿಶ್ವನಾಥ್ ಮಾತನಾಡಿ, ‘ಮೀಸಲಾತಿ ವಿಚಾರದಲ್ಲಿ ಸಂದರ್ಭಕ್ಕೆ ತಕ್ಕಂತೆ ಆಯಾ ಸರ್ಕಾರಗಳು ತೀರ್ಮಾನ ತೆಗೆದುಕೊಂಡಿವೆ. ಆದರೆ, ಈಗ ಮೀಸಲಾತಿಯೇ ದೊಡ್ಡ ಸಮಸ್ಯೆ ಆಗಿದೆ. ಕೊಡಗಿಗೆ ಮಾತ್ರ ಸೀಮಿತವಾಗಿರುವ ಕುರುಬ ಬುಡಕಟ್ಟಿನ ಪ್ರದೇಶ ನಿರ್ಬಂಧ ತೆಗೆದು, ಇಡೀ ರಾಜ್ಯಕ್ಕೆ ವಿಸ್ತರಿಸಬೇಕು’ ಎಂದು ಕೇಂದ್ರಕ್ಕೆ ಮನವಿ ಮಾಡಿದರು.
‘ಸೆಪ್ಟೆಂಬರ್ 19ರಂದು ಕೇಂದ್ರ ಸರ್ಕಾರ ಕೆಲ ಮಾಹಿತಿಗಳನ್ನು ರಾಜ್ಯ ಸರ್ಕಾರಕ್ಕೆ ಕೇಳಿದೆ. ಸಮುದಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಕೆ. ಮುಕುಡಪ್ಪ, ಕೆ.ಇ.ಕಾಂತೇಶ್, ಎನ್.ಮಂಜುನಾಥ್, ಟಿ.ಎನ್.ಮಾನೇಶ್, ಶಿವಪ್ಪ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.