ಎಫ್‌ಐಆರ್
ಬೆಂಗಳೂರು: ನಿವೇಶನ ಖರೀದಿಗಾಗಿ ಪಡೆದಿದ್ದ ಸಾಲದ ಹಣವನ್ನು ವಾಪಸ್ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ರಾಜ್ಯ ಹಣಕಾಸು ಸಂಸ್ಥೆಯ (ಕೆಎಸ್‌ಎಫ್‌ಸಿ) ಉಪ ವ್ಯವಸ್ಥಾಪಕಿ ಬಿ.ಕವಿತಾ ಹಾಗೂ ಅವರ ಪತಿ ಹೇಮಂತ್ ಕುಮಾರ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ನಗರದಲ್ಲಿ ಕೇಬಲ್ ಉದ್ಯಮ ನಡೆಸುತ್ತಿರುವ ಪಿ.ನಾಗರಾಜು ಅವರ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
‘ಕಮಲಾನಗರದಲ್ಲಿ ವಾಸಗಿರುವ ಕವಿತಾ ದಂಪತಿ, ನಿವೇಶನ ಖರೀದಿಗಾಗಿ ₹20 ಲಕ್ಷ ನಗದು ಕೇಳಿದ್ದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರೂ, ಸಕಾಲದಲ್ಲಿ ಹಣ ಹಿಂತಿರುಗಿಸುವುದಾಗಿ ಮನವಿ ಮಾಡಿದ ಮೇರೆಗೆ, ಪರಿಚಿತರಾದ ಕಾರಣ ₹17 ಲಕ್ಷ ನೀಡಲು ಒಪ್ಪಿದೆ. ನಂತರ ಅವರು ಹೇಳಿದ ಎರಡು ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದೆ’ ಎಂದು ನಾಗರಾಜ್ ದೂರಿನಲ್ಲಿ ತಿಳಿಸಿದ್ದಾರೆ.
‘ವರ್ಷದ ಬಳಿಕ ಸಾಲ ವಾಪಸ್ ನೀಡುವಂತೆ ಕೇಳಿದಾಗ, ಮತ್ತೊಂದು ವರ್ಷ ಕಾಲಾವಕಾಶ ನೀಡುವಂತೆ ಆರೋಪಿಗಳು ಕೋರಿದರು. ಕೇಳಿದಾಗ ಸಬೂಬು ಹೇಳುತ್ತಿದ್ದರು ಹೊರತು ಹಣ ವಾಪಸ್ ನೀಡಲಿಲ್ಲ. ಜೂನ್ 2ರಂದು ಕವಿತಾ ಅವರು ನೀಡಿದ ಚೆಕ್ ಅಮಾನ್ಯಗೊಂಡಿತು. ನಂತರ ಈ ವಿಷಯ ಆರೋಪಿಗಳಿಗೆ ತಿಳಿಸಿದೆ. ‘ಹಣ ನೀಡುವುದಿಲ್ಲ. ರಾಜಕೀಯ ಮುಖಂಡರು, ರೌಡಿಗಳು ಗೊತ್ತು’ ಎಂದು ಜೀವ ಬೆದರಿಕೆ ಹಾಕಿದರು. ಹಣ ಪಡೆದು ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.