ADVERTISEMENT

ಕೆಎಸ್‌ಎಚ್‌ಡಿಸಿ; ₹ 5.01 ಕೋಟಿ ಅವ್ಯವಹಾರ

ಅಧಿಕೃತ ಖಾತೆಯಿಂದ ನಕಲಿ ಖಾತೆಗೆ ಹಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 20:13 IST
Last Updated 22 ಜೂನ್ 2020, 20:13 IST

ಬೆಂಗಳೂರು: ‘ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ’ (ಕೆಎಸ್‌ಎಚ್‌ಡಿಸಿ) ಅಧಿಕೃತ ಖಾತೆಯಿಂದ ನಕಲಿ ಖಾತೆಗೆ ₹ 5.01 ಕೋಟಿ ವರ್ಗಾಯಿಸಿ ಅವ್ಯವಹಾರ ಎಸಗಲಾಗಿದೆ ಎಂದು ಆರೋಪಿಸಿ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗಿದೆ.

ಅವ್ಯವಹಾರದಲ್ಲಿ ಕೆಂಪೇ ಗೌಡ ರಸ್ತೆಯಲ್ಲಿರುವ ಬ್ಯಾಂಕಿನ ಕಚೇರಿಯ– 03ರ ಪ್ರಾದೇಶಿಕ ವ್ಯವಹಾರ ಸಹಾಯಕ ವ್ಯವಸ್ಥಾಪಕ ಸತೀಶ್‌ ವಂಬಶೆ ಮತ್ತು ಕೆಎಸ್‌ ಎಚ್‌ಡಿಸಿ ಕೆಲ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋ‌ಪಿಸಿ ಎಸ್‌ಬಿಐ ಮುಖ್ಯ ವ್ಯವಸ್ಥಾಪಕಿ ಪಲ್ಲವಿ ಗೋಯಲ್‌ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಸಿಬಿಐ ಎಸಿಬಿ ಎಫ್‌ಐಆರ್‌ ದಾಖಲಿಸಿದೆ. ಕೆಎಸ್‌ ಎಚ್‌ಡಿಸಿ 2018ರ ಜುಲೈ 21ರಂದು ಹೆಸರ ಘಟ್ಟ ರಸ್ತೆಯ ಎಸ್‌ಬಿಐ ಶಾಖೆಯಲ್ಲಿ ಚಾಲ್ತಿ ಖಾತೆ (37828879815) ತೆರೆಯಿತು. ಆ ಸಮಯದಲ್ಲಿ ಶಾಖೆ ಸಹಾಯಕ ವ್ಯವಸ್ಥಾಪಕರಾಗಿದ್ದ ವಂಬಶೆ ಅಕ್ರಮ ಮಾರ್ಗದಲ್ಲಿ ಕೆಎಸ್‌ ಎಚ್‌ಡಿಸಿ ಹೆಸರಿನಲ್ಲಿ ಮತ್ತೊಂದು ನಕಲಿ ಖಾತೆ (37830657832) ತೆರೆದರು. ಇದಕ್ಕೆ ಕೆಎಸ್‌ಎಚ್‌ಡಿಸಿ ಅಧಿಕೃತ ಕೋರಿಕೆ ಇರಲಿಲ್ಲ. 2018ರ ಜುಲೈ 27ರಂದು ಕೆನರಾ ಬ್ಯಾಂಕ್‌ ಆರ್‌ಟಿಜಿಎಸ್‌ ಮುಖಾಂತರ ಕೆಎಸ್‌ಎಚ್‌ಡಿಸಿ ಅಧಿಕೃತ ಖಾತೆಗೆ ₹ 5.01 ಕೋಟಿ ಜಮಾ ಮಾಡಿತ್ತು. ಈ ಹಣವನ್ನು ಅನಧಿಕೃತವಾಗಿ ತೆರೆಯಲಾಗಿದ್ದ ಚಾಲ್ತಿ ಖಾತೆಗೆ (37830657832) ವರ್ಗಾವಣೆ ಮಾಡಿ, ₹ 25 ಲಕ್ಷವನ್ನು ನಿಶ್ಚಿತ ಠೇವಣಿ ಇಡಲಾಗಿತ್ತು. ಉಳಿದ ₹₹ 4.76 ಕೋಟಿ ಹಣವನ್ನು 2018ರ ಜುಲೈ 30 ರಿಂದ 2018ರ ಸೆಪ್ಟೆಂಬರ್‌ 6ರವರೆಗೆ 12 ಆರ್‌ಟಿಜಿಎಸ್‌ ಮೂಲಕ ಇಂಡಿಯನ್‌ ಬ್ಯಾಂಕಿನ ವೆಲೊಹರ್‌ ಇನ್‌ಫ್ರಾ ಪ್ರೈವೇಟ್‌ ಲಿ. ಹಾಗೂ ಅಲಹಾಬಾದ್‌ ಬ್ಯಾಂಕಿನ ವೆಂಚರ್‌ ಕಾಟೇಜ್‌ ಇಂಡಸ್ಟ್ರಿಯಲ್‌ ಟ್ರೇಡ್‌ ಕಾರ್ಪೊರೇಷನ್‌ ಖಾತೆಗೆ ವರ್ಗಾಯಿಸಲಾಗಿತ್ತು. ಈ ಸಂಬಂಧ ಕೆಎಸ್‌ ಎಚ್‌ಡಿಸಿ ಸಹಾಯಕ ವ್ಯವಸ್ಥಾಪಕ (ಹಣಕಾಸು) ನಕಲಿ ಚೆಕ್‌ಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಕ್ರಮವಾಗಿ ಹಣ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದ್ದಾಗ್ಯೂ ವಂಬಶೆ 2018ರ ಜುಲೈ 27ರಂದು ಒಂದು ವರ್ಷದ ಅವಧಿಗೆ ಶೇ 7.15 ಬಡ್ಡಿ ದರಕ್ಕೆ ಎಸ್‌ಟಿಡಿಆರ್‌(ಅಲ್ಪಾವಧಿ ಠೇವಣಿ) ರಶೀದಿ (ಖಾತೆ ಸಂಖ್ಯೆ 37841592643) ನೀಡಿದ್ದರು. ವಾಸ್ತವವಾಗಿ ಈ ಎಸ್‌ಟಿಡಿಆರ್‌ ₹ 25 ಲಕ್ಷಕ್ಕೆ 2018ರ ಜುಲೈ 30ರಂದು ತೆರೆಯಲಾಗಿತ್ತು. ವಂಬಶೆ 2019ರ ಏಪ್ರಿಲ್‌ 9ರಂದು ಬ್ಯಾಂಕಿನ ಲೆಟರ್‌ಹೆಡ್‌ ದುರ್ಬಳಕೆ ಮಾಡಿಕೊಂಡು, ‘ನಿಶ್ಚಿತ ಠೇವಣಿ ದಾಖಲೆ ಪರಿಶೀಲಿಸಲಾಗಿದ್ದು, ಸಮರ್ಪಕವಾಗಿದೆ. ಬಡ್ಡಿ ಸೇರಿಸಿ ₹ 5,37,79,346 ಅನ್ನು ಕೋರ್‌ ಬ್ಯಾಂಕಿಂಗ್‌ ಮೂಲಕ ನಿಗಮದ ಖಾತೆಗೆ ಜಮೆ ಮಾಡಲಾಗುವುದು’ ಎಂದು ತಿಳಿಸಿದ್ದರು. ವಂಬಶೆ ಹಾಗೂ ಕೆಎಚ್‌ಎಸ್‌ಡಿಸಿಯ ಕೆಲವು ಅನಾಮಧೇಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಸಂಚು, ವಂಚನೆ, ಫೋರ್ಜರಿ, ನಂಬಿಕೆ ದ್ರೋಹದಡಿ ಸಿಬಿಐ ಪ್ರಕರಣ ದಾಖಲಿಸಿ, ತನಿಖೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.