ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿಗೆ ಶೀಘ್ರ ಅಧ್ಯಕ್ಷರ ನೇಮಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 19:54 IST
Last Updated 23 ಸೆಪ್ಟೆಂಬರ್ 2019, 19:54 IST
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್   

ಬೆಂಗಳೂರು: ‌ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಶೀಘ್ರವೇ ಅಧ್ಯಕ್ಷರನ್ನು ನೇಮಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ಹುದ್ದೆಗೆ ಸುಧಾಕರ್ ಅವರನ್ನು ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯನಹಳ್ಳಿ ನಿವಾಸಿ ಆರ್. ಆಂಜನೇಯರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಸೋಮವಾರ ನಡೆಸಿತು.

‘ಸುಧಾಕರ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಸರ್ಕಾರ ಅದನ್ನು ಅಂಗೀಕರಿಸಿದೆ. ಪರಿಸರ ಮತ್ತು ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಂದೀಪ್ ದವೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಸರ್ಕಾರಿ ವಕೀಲರು ವಿವರಣೆ ನೀಡಿದರು.

ADVERTISEMENT

‘ಸುಧಾಕರ ಅವರು ರಾಜೀನಾಮೆ ನೀಡಿರುವ ಕಾರಣ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ. ಆದರೆ, ಸರ್ಕಾರ ಶೀಘ್ರವೇ ಅಧ್ಯಕ್ಷರನ್ನು ನೇಮಕ ಮಾಡಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನದಂತೆ ಮಾರ್ಗಸೂಚಿ ಹೊರಡಿಸಬೇಕು’ ಎಂದು ಪೀಠ ಹೇಳಿತು.

‘ಪರಿಸರ ತಜ್ಞರನ್ನೇ ಕೆಎಸ್‌ಪಿಸಿಬಿ ಅಧ್ಯಕ್ಷ ಹುದ್ದೆಗೆ ನೇಮಿಸಬೇಕೆಂದು ಸುಪ್ರೀಂ ಕೋರ್ಟ್ 2012ರಲ್ಲಿ ಎಲ್ಲಾ ರಾಜ್ಯಗಳಿಗೆ ತಿಳಿಸಿದೆ. ಆದರೂ ತಜ್ಞರಲ್ಲದ ಸುಧಾಕರ್ ಅವರನ್ನು ನೇಮಿಸಲಾಗಿದೆ. ಇದು ರಾಜಕೀಯ ಪ್ರೇರಿತವಾಗಿದ್ದು, ನೇಮಕ ತಡೆಹಿಡಿಯಬೇಕು’ ಎಂದು ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.