ADVERTISEMENT

ಕೋವಿಡ್-19 ಭೀತಿ: ಮೆಟ್ರೊ ರೈಲು, ಬಸ್‌ಗಳಲ್ಲಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:15 IST
Last Updated 4 ಮಾರ್ಚ್ 2020, 20:15 IST
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಸನಗಳನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆಸನಗಳನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ   

ಬೆಂಗಳೂರು: ಕೋವಿಡ್ 19 ಹಬ್ಬುವ ಭೀತಿ ಹಿನ್ನೆಲೆಯಲ್ಲಿ ರೈಲು, ಮೆಟ್ರೊ ರೈಲು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳನ್ನು ಬುಧವಾರ ಸ್ವಚ್ಛಗೊಳಿಸಲಾಯಿತು.

ಬಸ್‌ಗಳ ಆಸನ, ಕಂಬಿಗಳು, ದ್ವಾರಗಳು, ರೈಲು ಮತ್ತು ಮೆಟ್ರೋ ನಿಲ್ದಾಣಗಳನ್ನು ಒದ್ದೆ ಬಟ್ಟೆಯಿಂದ ಆಗಾಗ ಒರೆಸುವುದು ಕಂಡುಬಂತು. ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಬಸ್ ಡಿಪೊಗಳಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಅಧಿಕಾರಿಗಳು ಮಾರ್ಗದರ್ಶನ ನೀಡಿದರು. ಬಿಎಂಟಿಸಿ ಚಾಲಕ ಯೋಗೇಶ್‌ ಗೌಡ ಎಂಬುವರು ಬುಧವಾರ ಸುಮಾರು 250 ಮಾಸ್ಕ್ ಖರೀದಿಸಿ ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಚಾಲನಾ ಸಿಬ್ಬಂದಿಗೆ ವಿತರಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯದ ಇತರೆ ಪ್ರದೇಶಗಳಿಗೆ ಸಂಚರಿಸುವ ವೋಲ್ವೊ ಹಾಗೂ ಪ್ಲೈಬಸ್‌ಗಳಿಗೆ ಬ್ಯಾಕ್ಟೀರಿಯಾ ನಿರೋಧಕ ದ್ರಾವಣ ಬಳಸಿ ಧೂಮೀಕರಣ (ಫ್ಯೂಮಿಗೇಷನ್) ಮಾಡಲಾಗುತ್ತಿದೆ. ಬಸ್‌ ಹೊರಡುವ ಮುನ್ನ ಮತ್ತು ಹಿಂದಿರುಗಿ ಡಿಪೊಗೆ ಬಂದ ನಂತರ ಶುಚಿಗೊಳಿಸಲು ಸೂಚನೆ ನೀಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.