ADVERTISEMENT

ದರ ಭಾರವಾದರೂ ಬಸ್‌ಗಳು ಫುಲ್‌

ಸಾಲು ರಜೆ, ಚುನಾವಣೆ: ರಾಜಧಾನಿಯಿಂದ ಹೊರಟ ಪ್ರಯಾಣಿಕರ ದಂಡು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:22 IST
Last Updated 16 ಏಪ್ರಿಲ್ 2019, 20:22 IST
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಮಂಗಳವಾರ ರಾತ್ರಿ ಕಂಡುಬಂತು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಮಂಗಳವಾರ ರಾತ್ರಿ ಕಂಡುಬಂತು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಸಾಲು ಸಾಲು ರಜೆಗಳು ಬಂದಿರುವ ಕಾರಣ ಹೆಚ್ಚಿನ ಸಂಖ್ಯೆಯ ಜನರು ಹೊರ ಜಿಲ್ಲೆಗಳಿಗೆ ತೆರಳುತ್ತಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸಂಸ್ಥೆಗಳು ಪ್ರಯಾಣ ದರವನ್ನು ಹೆಚ್ಚಿಸಿವೆ.

ಏಪ್ರಿಲ್‌ 17 ಬುಧವಾರ ಮಹಾವೀರ ಜಯಂತಿ, ಗುರುವಾರ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ, ಶುಕ್ರವಾರ ಗುಡ್‌ ಫ್ರೈಡೇ, ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿಯೇ ರಜೆ ದಿನಗಳಾದ್ದರಿಂದ ಸರಣಿ ರಜೆ ಇದೆ.

ಈ ಹಿನ್ನೆಲೆಯಲ್ಲಿನಗರದ ಪ್ರಮುಖ ಬಸ್‌ ನಿಲ್ದಾಣಗಳ ಬಳಿ ಜನರು ಬಸ್‌ಗಳಿಗಾಗಿಕಾಯುತ್ತಿರುವ ದೃಶ್ಯ ಮಂಗಳವಾರ ಸಾಮಾನ್ಯವಾಗಿತ್ತು. ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರನ್ನು ಕೂಗಿ ಕೂಗಿ ಬಸ್‌ ಹತ್ತಿಸಿಕೊಳ್ಳುತ್ತಿದ್ದರು. ತಮ್ಮ ಮಣ ಭಾರದ ಬ್ಯಾಗ್‌ಗಳ ಜೊತೆಗೆ ದರ ಹೆಚ್ಚಳದ ಭಾರವನ್ನೂ ಹೊತ್ತುಕೊಂಡು ಶಪಿಸುತ್ತಲೇ ಪ್ರಯಾಣಿಕರು ಬಸ್‌ ಹತ್ತಿದರು.

ADVERTISEMENT

ಚುನಾವಣೆ ಇರುವುದರಿಂದ ಬಸ್‌ ದರ ಹೆಚ್ಚಿಸುವಂತಿಲ್ಲ ಎಂದು ಸಾರಿಗೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಆದರೂ ಬಸ್‌ ದರ ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು.

ಖಾಸಗಿ ಬಸ್‌ಗಳಿಗೆ ಹೆಚ್ಚಿದ ಬೇಡಿಕೆ: ಸರ್ಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಸರ್ಕಾರಿ ಬಸ್‌ ನಿಲ್ದಾಣಗಳಿಗಿಂತ ಖಾಸಗಿ ಬಸ್‌ ನಿಲ್ದಾಣದಲ್ಲಿ ಜನರು ಹೆಚ್ಚುಕಿಕ್ಕಿರಿದು ಸೇರಿದ್ದರು. ಯುವಜನರುಕ್ಷಣ ಕ್ಷಣಕ್ಕೂ ಮೊಬೈಲ್‌ ಪರದೆಯ ಕಡೆಗೆ ಕಣ್ಣೊರಳಿಸುತ್ತ ತಮ್ಮವಾಹನ ಬಂದಿದೆಯೋ ಇಲ್ಲವೋ ಎನ್ನುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು.

ಉತ್ತರ ಕರ್ನಾಟಕದ ಕಡೆಗೆ ಹೊರಡುವ ಬಸ್‌ಗಳು ಖಾಲಿ ಖಾಲಿ ಹೊಡೆಯುತ್ತಿದ್ದವು. ಬೆರಳೆಣಿಕೆಯಷ್ಟು ಜನ ಮಾತ್ರ ಬಸ್‌ಗಳನ್ನು ಹತ್ತಿದ್ದು, ಕಂಡುಬಂತು.

ಖಾಸಗಿ ಬಸ್‌ಗಳ ತಪಾಸಣೆ

ಪ್ರಯಾಣ ದರ ಏರಿಕೆ ಹಾಗೂ ಸರಕು ಸಾಗಣೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳು, ನಗರದಲ್ಲಿ ಮಂಗಳವಾರ ರಾತ್ರಿ ಖಾಸಗಿ ಬಸ್‌ಗಳ ತಪಾಸಣೆ ನಡೆಸಿದರು.

ಗೋರಗುಂಟೆಪಾಳ್ಯ ಹಾಗೂ ಪೀಣ್ಯದಲ್ಲಿ ಬಸ್‌ಗಳನ್ನು ತಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳು, ದರದ ಬಗ್ಗೆ ಪ್ರಯಾಣಿಕರಿಂದ ಮಾಹಿತಿ ಪಡೆದುಕೊಂಡರು. ಸರಕು ಸಾಗಿಸುತ್ತಿದ್ದ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

‘ಕೆಲ ಬಸ್‌ಗಳು ಸಾರಿಗೆ ನಿಯಮ ಉಲ್ಲಂಘಿಸಿದ್ದು ಪತ್ತೆಯಾಗಿದೆ. ಅಂಥ ಬಸ್‌ಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಬಸ್‌ಗಳಲ್ಲಿ ಪ್ರಯಾಣಿಕರು ಇದ್ದ ಕಾರಣ ಜಪ್ತಿ ಮಾಡದೇ ಬಿಟ್ಟು ಕಳುಹಿಸಲಾಗಿದೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಲೋಕಸಭಾ ಚುನಾವಣೆ ಹಾಗೂ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಕೆಲ ಬಸ್‌ನವರು ಪ್ರಯಾಣ ದರ ಏರಿಕೆ ಮಾಡಿದ ಬಗ್ಗೆ ದೂರುಗಳು ಬಂದಿದ್ದವು. ಅದನ್ನು ಆಧರಿಸಿ ತಪಾಸಣೆ ಮಾಡಲಾಯಿತು’ ಎಂದು ಹೇಳಿದರು.

ಪ್ರಯಾಣಿಕರ ದಟ್ಟಣೆ: ಹೆಚ್ಚುವರಿ ಬಸ್‌ ವ್ಯವಸ್ಥೆ

ಸಂಸ್ಥೆಯ ಸುಮಾರು 3,300 ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಕೆಯಾಗುತ್ತಿರುವುದರಿಂದ ಜನದಟ್ಟಣೆ ಇಲ್ಲದ ಮಾರ್ಗಗಳಲ್ಲಿ ಬಸ್‌ ಓಡಾಟ ಕಡಿಮೆ ಮಾಡಿ, ಜನದಟ್ಟಣೆ ಹೆಚ್ಚಿರುವ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತಿಳಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಇದೇ 23ರಂದು ಚುನಾವಣೆ ನಡೆಯ ಲಿದೆ. ಹೀಗಾಗಿ, ಈ ಭಾಗಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಈಶಾನ್ಯ ಮತ್ತು ವಾಯವ್ಯ ಸಾರಿಗೆ ನಿಗಮಗಳ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಅಲ್ಲದೆ, ಇದೇ 17 ಮತ್ತು 18ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸುವವರ ಅನುಕೂಲಕ್ಕಾಗಿ ಬಿಎಂಟಿಸಿಯ 200 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯಾಚರಿಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.