
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚನೆ ನೀಡಿದ ಬೆನ್ನಲ್ಲೇ, ವ್ಯವಸ್ಥಾಪಕ ನಿರ್ದೇಶಕರು ಸುರಕ್ಷತೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ಅವುಗಳ ಪಾಲನೆ ಮಾಡುವಂತೆ ತಿಳಿಸಿದ್ದಾರೆ.
ಬಸ್‌ಗಳಲ್ಲಿ ಇರುವ ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಬೇಕು. ಸುರಕ್ಷತಾ ಕ್ರಮಗಳ ಬಗ್ಗೆ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಮುಖ್ಯ ಯಾಂತ್ರಿಕ ಎಂಜಿನಿಯರ್‌ಗಳು, ಉಗ್ರಾಣ ಮತ್ತು ಖರೀದಿ ನಿಯಂತ್ರಕರು, ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಗಣಕ ವ್ಯವಸ್ಥಾಪಕರು, ವಿಭಾಗ ಉಸ್ತುವಾರಿಗಳು ನ.10ರ ಒಳಗೆ ಎಲ್ಲ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಸೂಚಿಸಿದ್ದಾರೆ.
ಸೂಚನೆಗಳೇನು?:
* ಎಲ್ಲ ಪ್ರತಿಷ್ಠಿತ ಸಾರಿಗೆಯಲ್ಲಿ ಐದು ಲೀಟರ್‌ನ ಎರಡು ಅಗ್ನಿ ನಂದಕ ಇರಲೇಬೇಕು. ಇತರ ಬಸ್‌ಗಳಲ್ಲಿ ಇರುವ ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡಬೇಕು.
* ಬೆಂಕಿ ಪತ್ತೆ ಮತ್ತು ನಂದಿಸುವ ಸಿಸ್ಟಂ (ಎಫ್‌ಡಿಎಸ್‌ಎಸ್), ಬೆಂಕಿ ಎಚ್ಚರಿಕೆ ಮತ್ತು ರಕ್ಷಣಾ ವ್ಯವಸ್ಥೆ (ಎಫ್‌ಎಪಿಎಸ್) ಉಪಕರಣಗಳು ಸುಸ್ಥಿಯಲ್ಲಿರುವಂತೆ ನೋಡಿಕೊಳ್ಳಬೇಕು.
* ಬಸ್‌ಗಳಲ್ಲಿರುವ ಎಲೆಕ್ಟ್ರಿಕ್ ವೈರ್‌ಗಳು ಸುಸ್ಥಿತಿಯಲ್ಲಿವೆಯೆ ಎಂದು ನಿತ್ಯವೂ ಪರಿಶೀಲಿಸಬೇಕು. ಉಜ್ಜುವಿಕೆಯಿಂದ ಬೆಂಕಿ ಉಂಟಾಗದಂತೆ ತಡೆಯಲು ಬ್ಯಾಟರಿ ಕೇಬಲ್‌ಗೆ ಸ್ಲೀಚ್, ರಬ್ಬರ್ ಗ್ರೊಮೆಟ್ ಬುಷ್ ಅಳವಡಿಸಬೇಕು.
* ಹವಾನಿಯಂತ್ರಿತ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಗಾಜು ಒಡೆದು ಹೊರಬರಲು ಅನುಕೂಲವಾಗುವಂತೆ ಸುತ್ತಿಗೆ (ಹ್ಯಾಮರ್) ಇರಬೇಕು.
* ರಾತ್ರಿ ವೇಳೆ ಚಾಲನಾ ಸಿಬ್ಬಂದಿ ಸೊಳ್ಳೆ ಕಾಯಿಲ್ ಹಚ್ಚಬಾರದು.
* ಬಾಗಿಲುಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು.
* ಬೆಂಕಿ ಆಕರ್ಷಿಸುವ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ ಎಂದು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಆಗಾಗ ವಿಡಿಯೊ, ಆಡಿಯೊ ಪ್ರಸ್ತುತಪಡಿಸಬೇಕು.
ಅವಘಡ ಉಂಟಾದಾಗ...
* ಚಾಲನಾ ಸಿಬ್ಬಂದಿ ಪ್ಯಾನಿಕ್ ಬಟನ್ ಒತ್ತಿ ಪ್ರಯಾಣಿಕರನ್ನು ಎಚ್ಚರಿಸಬೇಕು. ಇಳಿಯಲು ಸೂಚಿಸಬೇಕು.
* ಅಗ್ನಿ ನಂದಕ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಬೇಕು.
* 101ಕ್ಕೆ ಕರೆ ಮಾಡಿ ನಿಖರ ಮಾಹಿತಿ ನೀಡಬೇಕು.
* ಕೆಎಸ್‌ಆರ್‌ಟಿಸಿ ನಿಯಂತ್ರಣ ಕೊಠಡಿಯ ಸಂಖ್ಯೆ 7760990100 ಹಾಗೂ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು.
* ಸುತ್ತಿಗೆಯಿಂದ ಹೊಡೆದು ಕಿಟಕಿಯ ಗಾಜುಗಳನ್ನು ಒಡೆದು ಪ್ರಯಾಣಿಕರು ಹೊರಬರುವಂತೆ ಮಾಡಬೇಕು. * ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕಳುಹಿಸಬೇಕು.
* ಘಟಕದ ಅಧಿಕಾರಿಗಳು ಪ್ರಯಾಣಿಕರ ವಿವರ ಸಂಗ್ರಹಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು.
ಬಸ್‌ಗಳ ಸಂಖ್ಯೆ
ಕೆಎಸ್‌ಆರ್‌ಟಿಸಿ; 8,893
ಬಿಎಂಟಿಸಿ; 6,897
ಎನ್‌ಡಬ್ಲ್ಯುಆರ್‌ಟಿಸಿ: 5,322
ಕೆಕೆಆರ್‌ಟಿಸಿ; 4,988
ಒಟ್ಟು; 26,100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.