ಬಿ.ವೈ.ವಿಜಯೇಂದ್ರ
- ಫೇಸ್‌ಬುಕ್ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಬೇಡಿಕೆಗಳನ್ನು ತಾತ್ಸಾರದಿಂದ ನೋಡದೇ, ಕೂಡಲೇ ಈಡೇರಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
‘ಆ.5 ರಿಂದ ನೌಕರರ ಸಂಘಗಳ ಒಕ್ಕೂಟ ನಡೆಸಲು ಉದ್ದೇಶಿಸಿರುವ ಮುಷ್ಕರಕ್ಕೆ ನೈತಿಕ ಬೆಂಬಲ ನೀಡುತ್ತೇವೆ’ ಎಂದು ಅವರು ‘ಎಕ್ಸ್’ ನಲ್ಲಿ ಹೇಳಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದೇ ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಸೇವೆ, ಬದ್ಧತೆಗೆ ಹೆಸರಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಡವಾಗಿಸಿದೆ. ಸಂಸ್ಥೆಯ ನೌಕರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದೂರಿದ್ದಾರೆ.
ಸಾರಿಗೆ ನಿಗಮಗಳ ನೌಕರರು ಸಂಕಷ್ಟಗಳ ನಡುವೆಯೂ ತಮ್ಮ ಸೇವಾ ನಿಷ್ಠೆಯನ್ನು ಸಂಯಮದಿಂದಲೇ ಮುಂದುವರೆಸಿಕೊಂಡು ಬಂದಿದ್ದಾರೆ. ನೌಕರರ ವೇತನ ಪರಿಷ್ಕರಣೆ ಮಾಡಿದ ಬಳಿಕ, ಪರಿಷ್ಕೃತ ಮೊತ್ತದ 38 ತಿಂಗಳ ಬಾಕಿಯನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಕೂಡಲೇ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಬೇಕು. ತುರ್ತುಕ್ರಮ ತೆಗೆದುಕೊಳ್ಳದೇ ಹೋದರೆ ಆ. 5 ರಿಂದ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನರಿಗೆ ಉಂಟಾಗುವ ಅನಾನುಕೂಲ ಪರಿಸ್ಥಿತಿ ,ತೊಂದರೆಗಳಿಗೆ ಸರ್ಕಾರವೇ ಹೊಣೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.