ADVERTISEMENT

ಕೆಎಸ್‌ಆರ್‌ಟಿಸಿಯಲ್ಲಿ ತರಬೇತಿ ಪರ್ವ: ಹೊಸ ನೌಕರರಿಗೂ, ಹಳಬರಿಗೂ ತರಬೇತಿ

ಹೊಸ ನೌಕರರಿಗೂ, ಹಳಬರಿಗೂ ತರಬೇತಿ * ಐದು ಕೇಂದ್ರಗಳಿಗೆ ತಲಾ ₹ 25 ಲಕ್ಷ ಮಂಜೂರು

ಬಾಲಕೃಷ್ಣ ಪಿ.ಎಚ್‌
Published 31 ಡಿಸೆಂಬರ್ 2025, 20:16 IST
Last Updated 31 ಡಿಸೆಂಬರ್ 2025, 20:16 IST
ಬಸ್ ಸಿಮ್ಯುಲೇಟರ್ ತರಬೇತಿ ಪಡೆಯುತ್ತಿರುವ ಸಿಬ್ಬಂದಿ
ಬಸ್ ಸಿಮ್ಯುಲೇಟರ್ ತರಬೇತಿ ಪಡೆಯುತ್ತಿರುವ ಸಿಬ್ಬಂದಿ   

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ತರಬೇತಿ ಪರ್ವ ಆರಂಭವಾಗಿದೆ. ಅಪಘಾತ ನಿಯಂತ್ರಣವೂ ಸೇರಿದಂತೆ 20ಕ್ಕೂ ಅಧಿಕ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಐದು ತರಬೇತಿ ಕೇಂದ್ರಗಳಿಗೆ ಅಪಘಾತ ಪರಿಹಾರ ನಿಧಿಯಿಂದ ತಲಾ ₹25 ಲಕ್ಷ ಮಂಜೂರು ಮಾಡಲಾಗಿದೆ. 

ಮಳವಳ್ಳಿಯಲ್ಲಿರುವ ಚಾಲಕ ಮತ್ತು ತಾಂತ್ರಿಕ ತರಬೇತಿ ಕೇಂದ್ರ, ಮಾಲೂರಿನಲ್ಲಿರುವ ಕೇಂದ್ರೀಯ ತರಬೇತಿ ಕೇಂದ್ರ, ಚಿಕ್ಕಮಗಳೂರಿನಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನದಲ್ಲಿರುವ ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಹೊಳಲ್ಕೆರೆ ಚಾಲನಾ ತರಬೇತಿ, ತಾಂತ್ರಿಕ ಕೌಶಲ ಅಭಿವೃದ್ಧಿ ಕೇಂದ್ರಗಳಲ್ಲಿ ತರಬೇತಿ ಕಾರ್ಯ ನಡೆಯುತ್ತಿದೆ.

ಯಾವ್ಯಾವ ತರಬೇತಿಗಳು ?: ಪುನಶ್ಚೇತನ, ಅಪಘಾತ ರಹಿತ ಚಾಲನೆ, ಕೆಎಂಪಿಎಲ್ (ಪ್ರತಿ ಲೀಟರ್‌ಗೆ ಸಂಚರಿಸಬೇಕಾದ ಕಿಲೋಮೀಟರ್‌), ಚಲನೆ ಆಧಾರಿತ ಬಸ್ ಸಿಮ್ಯುಲೇಟರ್, ಪಿಸಿಆರ್‌ಎ (ಇಂಧನ ಸಂರಕ್ಷಣೆ), ಕಂಪ್ಯೂಟರ್‌ ಸಾಕ್ಷರತೆ ಸೇರಿದಂತೆ, ಭದ್ರತಾ ಸಿಬ್ಬಂದಿಗೆ, ಕಿರಿಯ ಸಹಾಯಕರಿಗೆ, ತಾಂತ್ರಿಕ ಸಿಬ್ಬಂದಿಗೆ, ಮಹಿಳಾ ಸಿಬ್ಬಂದಿಗೆ, ಆಡಳಿತ ಸಿಬ್ಬಂದಿಗೆ, ಮೇಲ್ವಿಚಾರಣಾ ಸಿಬ್ಬಂದಿಗೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತಿದೆ.

ADVERTISEMENT

ಪ್ರತಿ ಕಿಲೋಮಿಟರ್‌ಗೆ ನಿಗದಿತ ಗಳಿಕೆಗಿಂತ ಕಡಿಮೆ ಸಂಗ್ರಹ ಮಾಡುವ ಬಸ್‌ ನಿರ್ವಾಹಕರಿಗೆ ತರಬೇತಿ, ಹೊಸದಾಗಿ ನೇಮಕಾತಿಗೊಂಡವರಿಗೆ ತರಬೇತಿ, ನಿವೃತ್ತರಾದ ಮೇಲೆ ಹಣಕಾಸು ನಿರ್ವಹಣೆ, ಬದುಕಿನ ನಿರ್ವಹಣೆ ಬಗ್ಗೆ ನಿವೃತ್ತರಿಗೂ ತರಬೇತಿ ನೀಡಲಾಗುತ್ತಿದೆ.

ಸಂಚಾರ ನಿಯಮಗಳು ಮತ್ತು ಸುರಕ್ಷಿತ ಚಾಲನೆ, ಚಾಲನಾ ಕೌಶಲ, ಸೇವಾ ನಿಯಮಗಳ ಬಗ್ಗೆ, ಕಾರ್ಮಿಕರ ಕಲ್ಯಾಣ ಯೋಜನೆಗಳ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಗಮದಿಂದಲೇ ತರಬೇತಿ: ಕೆಎಸ್‌ಆರ್‌ಟಿಸಿಯ ಐದು ತರಬೇತಿ ಕೇಂದ್ರಗಳು ಅಷ್ಟು ಸಕ್ರಿಯವಾಗಿರಲಿಲ್ಲ. ಸಿಎಂಕೆಕೆವೈ ಯೋಜನೆಯಡಿ ಭಾರಿ, ಲಘು ವಾಹನಗಳ ಚಾಲನಾ ತರಬೇತಿ, ಘನತ್ಯಾಜ್ಯ ನಿರ್ವಹಣಾ ಯೋಜನೆಯಡಿಯಲ್ಲಿ ಲಘು ವಾಹನಗಳ ತರಬೇತಿ, ಪಿಎಂ ಅಜಯ್‌ ಯೋಜನೆ ಚಾಲನಾ ತರಬೇತಿ, ತಾಂಡಾ ಅಭಿವೃದ್ಧಿ ಮಂಡಳಿಯ ಚಾಲನಾ ತರಬೇತಿ ಮುಂತಾದ ಸರ್ಕಾರಿ ಪ್ರಾಯೋಜಿತ ಯೋಜನೆಗಳಡಿ ವಿವಿಧ ತರಬೇತಿಗಳು ನಡೆಯುತ್ತಿದ್ದವು. ಈಗ ನಿಗಮದಿಂದಲೇ ತರಬೇತಿ ಶುರುವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದ, ಕೆಎಎಸ್‌, ಐಎಎಸ್‌ ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದ ಅನುಭವ ಇರುವ ಅಕ್ರಂ ಪಾಷ ಅವರು ಕೆಎಸ್‌ಆರ್‌ಟಿಸಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ಬಳಿಕ ಎಲ್ಲ ತರಬೇತಿ ಕೇಂದ್ರಗಳು ಸಕ್ರಿಯಗೊಂಡಿವೆ ಎಂದರು.

ತರಬೇತಿ ಪಡೆಯುತ್ತಿರುವ ಕೆಎಸ್‌ಆರ್‌ಟಿಸಿ ನೌಕರರು

- ತರಬೇತಿಯಿಂದ ಹೊಸತನದ ಕಲಿಕೆ

ಯಾವುದೇ ಇಲಾಖೆಯಲ್ಲಿ ಕಾಲಕಾಲಕ್ಕೆ ತರಬೇತಿ ನಡೆಯುತ್ತಿದ್ದರೆ ಅಧಿಕಾರಿಗಳಿಗೆ ನೌಕರರಿಗೆ ಹೊಸ ಚೈತನ್ಯ ಬರುತ್ತದೆ. ಕೆಲಸದ ಗುಣಮಟ್ಟ ದಕ್ಷತೆ ಹೆಚ್ಚುತ್ತದೆ. ತಂಡವಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ಕಲಿಯಲು ಸಾಧ್ಯವಾಗುತ್ತದೆ. ತ‍ಪ್ಪು ಮಾಡುವುದು ಕಡಿಮೆಯಾಗುತ್ತದೆ. ಒತ್ತಡ ನಿಯಂತ್ರಣ ಕೆಲಸದಲ್ಲಿ ಸಮತೋಲನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಹೊಸತನಕ್ಕೆ ಹೊಸತಂತ್ರಜ್ಞಾನಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಹೊಸದಾಗಿ ನೇಮಕಗೊಂಡವರಿಗೂ ಈಗಾಗಲೇ ಇರುವವರಿಗೂ ತರಬೇತಿ ನೀಡಲಾಗುತ್ತಿದೆ. ಚಾಲಕರು ನಿರ್ವಾಹಕರು ಸಂಚಾರ ನಿಯಂತ್ರಕರು ಕಲ್ಯಾಣ ಕಾನೂನು ತಾಂತ್ರಿಕ ವಿಭಾಗದವರು ಸೇರಿದಂತೆ ಎಲ್ಲರಿಗೂ ತರಬೇತಿ ನೀಡುತ್ತಿದ್ದು ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆ ಕಂಡು ಬಂದಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.