ADVERTISEMENT

29ರಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 14:51 IST
Last Updated 18 ಜುಲೈ 2025, 14:51 IST
<div class="paragraphs"><p>ಕೆಎಸ್‌ಆರ್‌ಟಿಸಿ</p></div>

ಕೆಎಸ್‌ಆರ್‌ಟಿಸಿ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಸರ್ಕಾರಿ ನೌಕರರಿಗೆ ನೀಡುವ ವೇತನ ಮತ್ತಿತರ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟ ಇದೇ 29ರಿಂದ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದೆ. 

ADVERTISEMENT

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪರವಾಗಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಆರ್. ಚಂದ್ರಶೇಖರ್, ‘ಏಳನೇ ವೇತನ ಆಯೋಗದ ಅನ್ವಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನವನ್ನು, 2024ರ ಜ.1ರಿಂದ ಅನ್ವಯವಾಗುವಂತೆ ಸಾರಿಗೆ ನೌಕರರಿಗೂ ನೀಡಬೇಕು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸಾರಿಗೆ ನೌಕರರಿಗೆ ಈ ಬಗ್ಗೆ ಭರವಸೆ ನೀಡಿತ್ತು. ಆದ್ದರಿಂದ ನಾವು ಪಕ್ಷವನ್ನು ಬೆಂಬಲಿಸಿದ್ದೆವು. ಆದರೆ, ಈಗ ಭರವಸೆಯನ್ನು ಈಡೇರಿಸುತ್ತಿಲ್ಲ. ಆದ್ದರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುತ್ತಿದೆ. 29ರಂದು ಸ್ವಾತಂತ್ರ್ಯ ಉದ್ಯಾನ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ನಡೆಸಲಾಗುತ್ತದೆ’ ಎಂದು ಹೇಳಿದರು. 

‘29ರೊಳಗೆ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ಸಭೆ ನಡೆಸಿ, ನಿರ್ಧರಿಸಲಾಗುತ್ತದೆ. ಸಾರಿಗೆ ನೌಕರರಿಗೆ 2020ರ ಜ.1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿದ್ದು, 38 ತಿಂಗಳ ಹಿಂಬಾಕಿಯನ್ನು ನೀಡಬೇಕು’ ಎಂದು ಆಗ್ರಹಿಸಿದರು. 

‘ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆ ಪ್ರಶ್ನೆ ಎದುರಾಗಿದ್ದು, ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ಕೂಡಲೇ ಘೋಷಿಸಬೇಕು. 2020 ಮತ್ತು 2021ರಲ್ಲಿ ನಡೆದ ಮುಷ್ಕರದ ವೇಳೆ ನೌಕರರನ್ನು ವಜಾ ಮಾಡಲಾದ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು. 

ಒಕ್ಕೂಟದ ಕಾನೂನು‌ ಸಲಹೆಗಾರ ಕೆ.ಇ. ರಾಧಾಕೃಷ್ಣ, ‘ಕಳೆದ ಒಂದೂವರೆ ವರ್ಷದಲ್ಲಿ ಕೆಎಸ್‌ಆರ್‌ಟಿಸಿ ಆದಾಯ ಹೆಚ್ಚಾಗಿದೆ. ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ನೀಡುವ ವೇತನ ಒದಗಿಸಿದಲ್ಲಿ ಹೆಚ್ಚುವರಿಯಾಗಿ ₹300 ಕೋಟಿ ಅಗತ್ಯ. ಇದು ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಸಾರಿಗೆ ನೌಕರರದ್ದು ನ್ಯಾಯಯುತ ಬೇಡಿಕೆಯಾಗಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.