ADVERTISEMENT

Bengaluru Lit Fest | ಗುಡಿಸಿಲಿನ ಕವಿ ಕುಮಾರವ್ಯಾಸ: ಕೃಷ್ಣಮೂರ್ತಿ ಹನೂರು ಉವಾಚ

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಡಿಸೆಂಬರ್ 2023, 19:28 IST
Last Updated 3 ಡಿಸೆಂಬರ್ 2023, 19:28 IST
<div class="paragraphs"><p>ಕುಮಾರವ್ಯಾಸನ ಕನ್ನಡ ಮಹಾಭಾರತ' ವಿಚಾರಗೋಷ್ಠಿಯಲ್ಲಿ ಎಸ್.ಎನ್.ಶ್ರೀಧರ್, ಸಿ.ಎನ್.ರಾಮಚಂದ್ರನ್ ಮತ್ತು ಕೃಷ್ಣಮೂರ್ತಿ ಹನೂರು ಇದ್ದಾರೆ –</p></div>

ಕುಮಾರವ್ಯಾಸನ ಕನ್ನಡ ಮಹಾಭಾರತ' ವಿಚಾರಗೋಷ್ಠಿಯಲ್ಲಿ ಎಸ್.ಎನ್.ಶ್ರೀಧರ್, ಸಿ.ಎನ್.ರಾಮಚಂದ್ರನ್ ಮತ್ತು ಕೃಷ್ಣಮೂರ್ತಿ ಹನೂರು ಇದ್ದಾರೆ –

   

ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ‘ಪಂಪ ಅರಮನೆಯ ಕವಿಯಾದರೆ, ಕುಮಾರವ್ಯಾಸ ಗುಡಿಸಿಲಿನ ಕವಿ’ ಎಂದು ವಿದ್ವಾಂಸ ಕೃಷ್ಣಮೂರ್ತಿ ಹನೂರು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಕುಮಾರವ್ಯಾಸಭಾರತದ ಇಂಗ್ಲಿಷ್‌ ಅನುವಾದದ ಬಗ್ಗೆ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಂಪನನ್ನೂ ಕುಮಾರವ್ಯಾಸನನ್ನೂ ಪರಸ್ಪರ ವಿರುದ್ಧ ನೆಲೆಯಲ್ಲಿ ನೋಡುತ್ತಿಲ್ಲ. ಆದರೆ ಇಬ್ಬರ ಕಾವ್ಯಪರಂಪರೆಯಲ್ಲಿ ಕಂಡುಬರುವ ಮನೋಧರ್ಮಗಳ ನೆಲೆಯಿಂದಷ್ಟೆ ಈ ಮಾತನ್ನು ಹೇಳುತ್ತಿರುವೆ ಎಂದು ಅವರು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದರು.

ಕುಮಾರವ್ಯಾಸಭಾರತದ ಹಸ್ತಪ್ರತಿಗಳು ರಾಜ್ಯದ ಉದ್ದಕ್ಕೂ ನೂರಾರು ಸಿಕ್ಕಿವೆ. ಕುಮಾರವ್ಯಾಸನ ಜನಪ್ರಿಯತೆಗೆ ಇದೂ ಸಾಕ್ಷಿ. ಮನಸ್ಸನ್ನು ಉದ್ಧರಿಸುವ ಮಾತುಗಳನ್ನು ಆಡಿರುವ ಕವಿಗೆ ಜನರಿಂದ ಸಹಜವಾಗಿಯೇ ಆದರಣೆ ಸಿಗುತ್ತದೆ. ಕುಮಾರವ್ಯಾಸ ಅಂಥ ಜನಪ್ರಿಯ ಕವಿ. ಜತೆಗೆ ಅವನ ವಿನಯವೂ ದೊಡದ್ದು. ವೀರನಾರಾಯಣನನ್ನೇ ತನ್ನ ಕೃತಿಯ ನಿಜವಾದ ಕವಿ ಎಂದು ಘೋಷಿಸಿಕೊಂಡವನು ಅವನು ಎಂದು ಅವರು ವಿವರಿಸಿದರು.

ಕುಮಾರವ್ಯಾಸನ ಕಾವ್ಯಪರಂಪರೆಯ ರುಚಿಯನ್ನು ಜನರಿಗೆ ನಿರಂತರವಾಗಿ ಉಣಿಸುತ್ತಬಂದವರು ಗಮಕಿಗಳು. ಹಳ್ಳಿಗಳಲ್ಲಿ ಕುಮಾರವ್ಯಾಸನ ಸಂಘಗಳೇ ಇದ್ದವು. 1954ರಲ್ಲಿ ಕೆಂಗಲ್‌ ಹನುಮಂತಯ್ಯನವರ ಉತ್ತೇಜನದಿಂದ ಕುಮಾರವ್ಯಾಸಭಾರತ ಪ್ರಕಟವಾದಾಗ ಆರು ತಿಂಗಳಲ್ಲಿಯೇ ಸುಮಾರು 40 ಸಾವಿರ ಪ್ರತಿಗಳು ಮಾರಾಟವಾದವು ಎಂದೂ ಹನೂರು ಸ್ಮರಿಸಿದರು.

‘ಕುಮಾರವ್ಯಾಸನನ್ನು ಓದಿದರೆ ಅವನ ಬಗ್ಗೆ ಜನರಿಗೆ ಇರುವ ಗೌರವಕ್ಕೆ ಕಾರಣ ತಿಳಿಯುತ್ತದೆ’ ಎಂದು ಕುಮಾರವ್ಯಾಸಭಾರತದ ಅನುವಾದಕರಲ್ಲಿ ಒಬ್ಬರಾದ ಸಿ. ಎನ್‌. ರಾಮಚಂದ್ರ ಹೇಳಿದರು. ಕುಮಾರವ್ಯಾಸನನ್ನು ಅನುವಾದಿಸುವಾಗ ಎದುರಿಸಬೇಕಾದ ಸವಾಲುಗಳ ಬಗ್ಗೆ ಅವರು ವಿವರಿಸಿದರು. 

ಅನುವಾದ ಯೋಜನೆಯ ಪ್ರಧಾನ ಸಂಪಾದಕ ಎಸ್‌.ಎನ್‌. ಶ್ರೀಧರ್‌ ‘ಇಂಗ್ಲಿಷ್‌ ಅನುವಾದದ ಮೂಲಕ ಕುಮಾರವ್ಯಾಸಭಾರತ ಈಗ ಜಗತ್ತಿನಾದ್ಯಂತ ತಲುಪಲಿದೆ’ ಎಂದರು. ಕುಮಾರವ್ಯಾಸಭಾರತದ ಕನ್ನಡ ಗದ್ಯಾನುವಾದಗಳಲ್ಲಿಯೇ ಹಲವು ಸಮಸ್ಯೆಗಳಿವೆ. ಹೀಗಾಗಿ ನಮ್ಮ ಇಂಗ್ಲಿಷ್‌ ಅನುವಾದದಲ್ಲೂ ದೋಷಗಳು ಇರಬಹುದು. ಓದುಗರ ಮತ್ತು ವಿದ್ವಾಂಸರ ಸಲಹೆಗಳಿಗೆ ಸ್ವಾಗತ. ದೋಷಗಳನ್ನು ಪ್ರೀತಿಯಿಂದ ತಿದ್ದಿರಿ. ಗುಣಗಳನ್ನು ಸಹೃದಯತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದರು.

ಕುಮಾರವ್ಯಾಸಭಾರತ ಇಂಗ್ಲಿಷ್‌ ಅನುವಾದ ಸಮಗ್ರ ಅನುವಾದವಲ್ಲ, ಸಂಗ್ರಹಾನುವಾದ ಮಾತ್ರ. ಮೊದಲ ಸಂಪುಟವನ್ನು ಗಮಕಿಗಳಿಗೆ ಮತ್ತು ವಿದ್ವಾಂಸರಿಗೆ ಅರ್ಪಿಸಿದ್ದೇವೆ. ಇನ್ನೂ ಎರಡು ಸಂಪುಟಗಳು ಪ್ರಕಟವಾಗಲಿವೆ. ಇವು ಓಪನ್‌ ಸೋರ್ಸ್‌’ನಲ್ಲೂ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು. ಇದಕ್ಕೂ ಮೊದಲು ಅವರು ‘ನಮ್ಮ ಪರಂಪರೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ಗುರುನಮನದೊಂದಿಗೆ ಆರಂಭವಾಗುತ್ತದೆ‘ ಎನ್ನುತ್ತ, ಅನುವಾದ ಯೋಜನೆಯಲ್ಲಿ ಸಹಕರಿಸುತ್ತಿರು ಹಲವರು ವಿದ್ವಾಂಸರನ್ನು ಸ್ಮರಿಸಿಕೊಂಡು ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.