ADVERTISEMENT

ಕುಂದು ಕೊರತೆ: ಪಾದಚಾರಿ ಮಾರ್ಗ ಸರಿಪಡಿಸಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 0:33 IST
Last Updated 23 ಜೂನ್ 2025, 0:33 IST
ಪಾದಚಾರಿ ಮಾರ್ಗಕ್ಕೆ ಹಾಕಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತುಹೋಗಿದೆ
ಪಾದಚಾರಿ ಮಾರ್ಗಕ್ಕೆ ಹಾಕಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತುಹೋಗಿದೆ   

‘ಪಾದಚಾರಿ ಮಾರ್ಗ ಸರಿಪಡಿಸಿ’

ಕೆಂಗೇರಿ ಬಸ್‌ ತಂಗುದಾಣದಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕಿತ್ತುಹೋಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ಅನನುಕೂಲವಾಗಿದೆ. ಪಾದಚಾರಿ ಮಾರ್ಗ ಹಾಳಾಗಿರುವುದರಿಂದ ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಪಾದಚಾರಿ ಮಾರ್ಗ ದುರಸ್ತಿಗೊಳಿಸಬೇಕು. 

- ವೆಂಕಟೇಶ್‌ ಮೂರ್ತಿ, ನಾಗರಬಾವಿ

ADVERTISEMENT

‘ಒಣಗಿದ ಕೊಂಬೆಗಳನ್ನು ಕತ್ತರಿಸಿ’

ಬಸವನಗುಡಿ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಗಾಂಧಿಬಜಾರ್‌ನ ಮುಖ್ಯರಸ್ತೆಯ ಹೋಟೆಲ್‌ ಆತಿಥ್ಯ ಸುತ್ತಮುತ್ತಲಿನಲ್ಲಿ ಬೃಹತ್‌ ಗಾತ್ರದ ಮರಗಳ ರೆಂಬೆ–ಕೊಂಬೆಗಳು ಒಣಗಿವೆ. ಮಳೆ ಬಂದರೆ, ಗಾಳಿ ಬೀಸಿದರೆ ಈ ಕೊಂಬೆಗಳು  ಬೀಳುವ ಸಾಧ್ಯತೆ ಇದೆ. ಗಾಂಧಿಬಜಾರ್‌ನಲ್ಲಿ ನಿತ್ಯ ಜನಸಂದಣಿ ಇರುತ್ತದೆ. ಯಾರ ಮೇಲಾದರೂ ಈ ಕೊಂಬೆಗಳು ಬಿದ್ದು, ಅನಾಹುತ ಸಂಭವಿಸುವ ಮುನ್ನ ಕತ್ತರಿಸಬೇಕು. ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 

- ಕೆ.ಎನ್. ಚಂದ್ರಶೇಖರ, ಶಂಕರಪುರ

‘ರಸ್ತೆ ಗುಂಡಿ ಮುಚ್ಚಿ’

ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದ ಹತ್ತಿರ ಇರುವ ಶ್ರೀಹರಿ ಪ್ಯಾಲೆಸ್‌ ಪಿ.ಜಿ. ಮುಂಭಾಗದ ರಸ್ತೆಯನ್ನು ಬೆಂಗಳೂರು ಜಲಮಂಡಳಿ ಅಗೆದುಹಾಕಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ಕೊಳವೆ ಜೋಡಿಸಲು ಈ ಮುಖ್ಯರಸ್ತೆಯ ಮಧ್ಯ ಭಾಗದಲ್ಲಿ ಅಗೆದು ಗುಂಡಿ ತೊಡಲಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಅಗೆದ ಪರಿಣಾಮ ಸಂಚಾರ ದಟ್ಟಣೆ ಆಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. 

- ಭರತ್, ವಿಜಯನಗರ 

‘ತ್ಯಾಜ್ಯ ವಿಲೇವಾರಿಗೆ ಆಗ್ರಹ’

ಕೆ.ಆರ್. ಪುರ ಮಾರುಕಟ್ಟೆಯಿಂದ ನೇತ್ರಾವತಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತರಕಾರಿ ತ್ಯಾಜ್ಯವನ್ನು ಸುರಿಯಲಾಗಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು. 

- ಗೌರಮ್ಮ, ನೇತ್ರಾವತಿ ಬಡಾವಣೆ 

ವರದಿಗೆ ಸ್ಪಂದನೆ

ಕೆಂಗೇರಿಯಿಂದ ಉತ್ತರಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಪಟಾಲಮ್ಮ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಡಾಂಬರು ಹಾಕಿ ಮುಚ್ಚಲಾಗಿದೆ. 

‘ಪ್ರಜಾವಾಣಿ’ಯ ಕುಂದು–ಕೊರತೆ ವಿಭಾಗದಲ್ಲಿ ಜೂನ್‌ 16ರಂದು ‘ರಸ್ತೆ ಸರಿಪಡಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟವಾಗಿತ್ತು. ಇದಿರಂದ ಎಚ್ಚೆತ್ತ ಬಿಬಿಎಂಪಿ ಸಿಬ್ಬಂದಿ ರಸ್ತೆ ದುರಸ್ತಿಗೊಳಿಸಿದ್ದಾರೆ. 

ಗಾಂಧಿಬಜಾರ್‌ನ ಸುತ್ತಮುತ್ತಲಿರುವ ಮರಗಳ ಕೊಂಬೆಗಳು ಒಣಗಿವೆ
ಮುಖ್ಯರಸ್ತೆಯನ್ನು ಅಗೆದು ಗುಂಡಿ ತೋಡಿದ್ದಾರೆ
ನೇತ್ರಾವತಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸುರಿದಿರುವ ತ್ಯಾಜ್ಯದ ರಾಶಿ
ಪಟಾಲಮ್ಮ ದೇವಸ್ಥಾನದ ರಸ್ತೆಗೆ ಡಾಂಬರು ಹಾಕಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.