‘ಕೆಸರು ಗದ್ದೆಯಂತಾದ ರಸ್ತೆ’
ಕೃಷ್ಣಾನಂದನಗರದಿಂದ ಯಶವಂತಪುರದ ಎಪಿಎಂಸಿ ಯಾರ್ಡ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇಂತಹ ರಸ್ತೆಯಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಳಾದ ಪರಿಣಾಮ ವಾಹನ ಸಂಚಾರಕ್ಕೆ ಅನನುಕೂಲವಾಗಿದ್ದು, ಸಂಚಾರ ದಟ್ಟಣೆ ಆಗುತ್ತಿದೆ. ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
-ನಾರಾಯಣ್, ಕೃಷ್ಣಾನಂದನಗರ
***
‘ರಸ್ತೆಯಲ್ಲಿನ ಕಸ ತೆರವುಗೊಳಿಸಿ’
ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಸಂಖ್ಯೆ 106ರ ಮೂರನೇ ಮುಖ್ಯರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್‌ನ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಕಚೇರಿ ಹತ್ತಿರದ ರಸ್ತೆಯಲ್ಲಿ ಕಸ ಸುರಿಯಲಾಗಿದೆ. ಸದ್ಯ ಇದು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬದಲಾಗಿದೆ. ಈ ಪ್ರದೇಶವೆಲ್ಲ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ಬಿಬಿಎಂಪಿ ಅಧಿಕಾರಿಗಳು ಇಲ್ಲಿ ರಾಶಿ ಹಾಕಿರುವ ಕಸವನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
-ಬಾಲಸ್ವಾಮಿ, ಸ್ಥಳೀಯ ನಿವಾಸಿ
***
‘ಪಾದಚಾರಿ ಮಾರ್ಗದಲ್ಲಿ ಬಾಯ್ತೆರೆದ ಗುಂಡಿ’
ರಾಮಮೂರ್ತಿನಗರದ ಟಿ.ಸಿ. ಪಾಳ್ಯ ಮುಖ್ಯರಸ್ತೆಯ 14ನೇ ಕ್ರಾಸ್‌ನ ಲೋಟಸ್ ಕನ್ವೆನ್ಷನ್ ಹಾಲ್ ಪಕ್ಕದ ಪಾದಚಾರಿ ಮಾರ್ಗದಲ್ಲಿ ಗುಂಡಿ ಬಿದ್ದಿದ್ದು, ಪಾದಚಾರಿ ಮಾರ್ಗ ಕುಸಿಯುವ ಭೀತಿ ಎದುರಾಗಿದೆ. ಇಲ್ಲಿನ ಚರಂಡಿಯ ಮೇಲೆ ಹಾಕಿರುವ ಹಾಸುಗಲ್ಲುಗಳು ಕುಸಿಯುವ ಹಂತಕ್ಕೆ ತಲುಪಿವೆ. ಇದರಿಂದ, ಸಾರ್ವಜನಿಕರು ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಬಿಬಿಎಂಪಿ ಕೂಡಲೇ ಇಲ್ಲಿನ ಪಾದಚಾರಿ ಮಾರ್ಗ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
-ಮಂಜುನಾಥ್ ಕುಮಾರ್ ಆರ್., ರಾಮಮೂರ್ತಿನಗರ
***
‘ರಸ್ತೆ ದುರಸ್ತಿಗೊಳಿಸಿ’
ಬಿಬಿಎಂಪಿ ವ್ಯಾಪ್ತಿಯ ಸುಬ್ರಮಣ್ಯಪುರ ವಾರ್ಡ್ ಸಂಖ್ಯೆ 203ರ ವ್ಯಾಪ್ತಿಯ ಗುಬ್ಬಲಾಳದಲ್ಲಿ ಜೆಸಿಎಚ್‌ಎಸ್ ಲೇಔಟ್‌ನ 2ನೇ ಹಂತದ ರಸ್ತೆ ಸಂಪೂರ್ಣ ಹಾಳಾಗಿದೆ. ಕುಡಿಯುವ ನೀರು ಪೂರೈಕೆ ಪೈಪ್‌ಗಳನ್ನು ಅಳವಡಿಸಲು ಇತ್ತೀಚೆಗೆ ಈ ರಸ್ತೆಯನ್ನು ಅಗೆಯಲಾಗಿತ್ತು. ನೀರಿನ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಮುಗಿದ ನಂತರ ರಸ್ತೆ ದುರಸ್ತಿಗೊಳಿಸದೇ ಹಾಗೆಯೇ ಬಿಡಲಾಗಿದೆ. ಇದರಿಂದ, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಮಳೆಗಾಲ ಇರುವುದರಿಂದ ರಸ್ತೆಯೆಲ್ಲ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೂ ಅನನುಕೂಲವಾಗಿದೆ. ಕೂಡಲೇ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
-ವೈ.ವಿ. ಪ್ರಭಾಕರ, ಜೆಸಿಎಚ್‌ಎಸ್ ಲೇಔಟ್
***
ಪಾದಚಾರಿ ಮಾರ್ಗದ ಅತಿಕ್ರಮಣ
ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಒಂದು ವರ್ಷದಿಂದ ಕಟ್ಟಡವೊಂದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಎಂ.ಸ್ಯಾಂಡ್, ಜಲ್ಲಿ ಕಲ್ಲನ್ನು ಪಾದಚಾರಿ ಮಾರ್ಗದ ಮೇಲೆ ರಾಶಿ ಹಾಕಿದ್ದಾರೆ, ಪಾದಚಾರಿ ಮಾರ್ಗವೆಲ್ಲ ಸಂಪೂರ್ಣ ಹಾಳಾಗಿದೆ. ಇದರಿಂದ, ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ವಾಹನಗಳ ನಿಲುಗಡೆ ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳ ದಾಸ್ತಾನಿಗೆ ಮುಖ್ಯರಸ್ತೆಯನ್ನೂ ಆಕ್ರಮಿಸಿಕೊಂಡಿದ್ದಾರೆ. ವಾಹನ ಸವಾರರು, ಅದಕ್ಕಿಂತ ಮುಖ್ಯವಾಗಿ ಪಾದಚಾರಿಗಳು ಜೀವವನ್ನು ಅಪಾಯಕ್ಕೆ ಒಡ್ಡಿಕೊಂಡು ಸಂಚರಿಸಬೇಕಾಗಿದೆ.
-ಎಚ್. ಆನಂದರಾಮ ಶಾಸ್ತ್ರೀ, ವಿದ್ಯಾರಣ್ಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.