ADVERTISEMENT

ಕುಂದು ಕೊರತೆ: ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 22:55 IST
Last Updated 7 ಸೆಪ್ಟೆಂಬರ್ 2025, 22:55 IST
ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಕಸದ ರಾಶಿ 
ಪಾದಚಾರಿ ಮಾರ್ಗದಲ್ಲಿ ಬಿದ್ದಿರುವ ಕಸದ ರಾಶಿ    

‘ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ’

ಬಿಟಿಎಂ ಲೇಔಟ್‌ನಿಂದ ಈಸ್ಟ್‌ಎಂಡ್‌ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಜಲಭವನ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಬಿದ್ದಿದೆ. ಕಸದೊಂದಿಗೆ ಮಾಂಸದ ತುಂಡುಗಳನ್ನು ತಂದು ಹಾಕಲಾಗುತ್ತದೆ. ಇದರಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿರುವ ಕಸವನ್ನು ವಿಲೇವಾರಿ ಮಾಡುವಂತೆ ಪಾಲಿಕೆ ಸಿಬ್ಬಂದಿಗೆ ಹೇಳಿದರೂ, ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿರುವ ಕಸವನ್ನು ವಿಲೇವಾರಿ ಮಾಡಿ, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. 

– ವಿ.ಎಸ್.ಕುಮಾರ್, ಬಿಟಿಎಂ ಲೇಔಟ್

ADVERTISEMENT

‘ಇಂದಿರಾ ಕ್ಯಾಂಟೀನ್‌ಗೆ ಮೂಲಸೌಲಭ್ಯ ಒದಗಿಸಿ’

ಹೆಬ್ಬಾಳದ ವಿ.ನಾಗೇನಹಳ್ಳಿಯ (ವಾರ್ಡ್‌ ಸಂಖ್ಯೆ 22) ಇಂದಿರಾ ಕ್ಯಾಂಟೀನ್‌ನಲ್ಲಿ ಮೂಲಸೌಲಭ್ಯಗಳು ಇಲ್ಲದಂತಾಗಿದೆ. ಕ್ಯಾಂಟೀನ್‌ ಹೊರಾಂಗಣಕ್ಕೆ ಹಾಕಿದ್ದ ಕಾಂಕ್ರೀಟ್‌ ಕಿತ್ತು ಹೋಗಿ, ಗುಂಡಿಗಳು ಬಿದ್ದಿವೆ. ಇದರಿಂದ ವೃದ್ಧರು, ಮಹಿಳೆಯರು ನಡೆದುಕೊಂಡು ಕ್ಯಾಂಟೀನ್‌ನ ಒಳಾಂಗಣಕ್ಕೆ ಪ್ರವೇಶಿಸಲು ಸಮಸ್ಯೆ ಆಗುತ್ತಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಪಂಪ್‌ನಲ್ಲಿನ ಸಮಸ್ಯೆಯಿಂದಾಗಿ ಕೊಳವೆ ಬಾವಿಯಿಂದ ನೀರು ಪೂರೈಕೆ ಆಗಾಗ ಸ್ಥಗಿತವಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.

– ರಮೇಶ್, ಹೆಬ್ಬಾಳ

‘ಕೆಸರು ಗದ್ದೆಯಾದ ರಸ್ತೆ’

ಹೊರಮಾವು ಬಳಿ ಇರುವ ಬಂಜಾರ ಬಡಾವಣೆಯ ಓಂ ಶಕ್ತಿ ದೇವಸ್ಥಾನದ ಪಕ್ಕದಲ್ಲಿ ನಗರ ಪಾಲಿಕೆ ಕೊಳವೆ ಬಾವಿ ಕೊರೆಸಿದೆ. ಕೊರೆಯುವಾಗ ಹೊರಬಿದ್ದ ಮಣ್ಣಿನ ರಾಶಿಯನ್ನು ರಸ್ತೆಯ ಮೇಲೆ ಹಾಕಲಾಗಿದೆ. ಮಳೆ ಬಂದಾಗ ಇಡೀ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇದರಲ್ಲಿ ವಾಹನ ಸಂಚಾರ ಮಾಡುವುದೇ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ರಸ್ತೆಯ ಮೇಲೆ ಹಾಕಿರುವ ಮಣ್ಣಿನ ರಾಶಿಯನ್ನು  ಸಂಬಂಧಪಟ್ಟ ‌ಅಧಿಕಾರಿಗಳು ವಿಲೇವಾರಿ ಮಾಡಬೇಕು. 

- ಇಂದಿರಾ, ಬಂಜಾರ ಬಡಾವಣೆ

‘ರಸ್ತೆ ದುರಸ್ತಿಗೊಳಿಸಿ’ 

ಮೆಜೆಸ್ಟಿಕ್ ಪ್ರದೇಶಕ್ಕೆ ಹೊಂದಿಕೊಂಡಿರುವ ಆಸ್ಪತ್ರೆ ರಸ್ತೆಯ ಉದ್ದಕ್ಕೂ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ಸಮಸ್ಯೆ ಆಗಿದೆ. ರಸ್ತೆಯಲ್ಲಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಕೈ, ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ಸಂಚಾರ ದಟ್ಟಣೆ ಆಗುತ್ತಿದೆ. ರಸ್ತೆ ದುರಸ್ತಿಗೊಳಿಸುವಂತೆ ಪಾಲಿಕೆ ಸಿಬ್ಬಂದಿಗೆ ಹಲವಾರು ಬಾರಿ ದೂರು ನೀಡಿದರೂ ಸ್ಪಂದಿಸುತ್ತಿಲ್ಲ.

- ಶಿವಪ್ರಸಾದ್ ಎಸ್, ಗಾಂಧಿನಗರ

ಇಂದಿರಾ ಕ್ಯಾಂಟೀನ್‌ ಹೊರಗೆ ಹಾಕಿದ್ದ ಕಾಂಕ್ರೀಟ್‌ ಕಿತ್ತು ಹೋಗಿದೆ 
ಬಂಜಾರ ಬಡಾವಣೆಗೆ ಸಂಪರ್ಕಿಸುವ ರಸ್ತೆ ಕೆಸರು ಗದ್ದೆ ಆಗಿದೆ
ಮೆಜೆಸ್ಟಿಕ್‌ನ ಆಸ್ಪತ್ರೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.