ADVERTISEMENT

ತಾರ್ಕಿಕ ಅಂತ್ಯದವರೆಗೆ ನಿಲ್ಲದು ಕುರುಬರ ಎಸ್‌ಟಿ ಹೋರಾಟ: ಕೆ. ವಿರೂಪಾಕ್ಷಪ್ಪ

ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 21:28 IST
Last Updated 4 ಮಾರ್ಚ್ 2021, 21:28 IST

ಬೆಂಗಳೂರು: ‘ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೆ ಮುಂದುವರಿಯಲಿದೆ. ಮುಂದಿನ ಹೋರಾಟದ ರೂಪುರೇಷೆಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು’ ಎಂದು ಹೋರಾಟ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ ಹೇಳಿದರು.

ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಗುರುವಾರ ನಡೆದ ಹೋರಾಟ ಸಮಿತಿಯ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸಲಾಗುತ್ತಿದೆ. ನಮ್ಮ ಹೋರಾಟ ಯಾರ ಪರವೂ ಅಲ್ಲ, ವಿರುದ್ದವೂ ಅಲ್ಲ. ನಮ್ಮ ಹೋರಾಟಕ್ಕೆ ರಾಜ್ಯ ಸರ್ಕಾರ ಈವರೆಗೆ ಸ್ಪಂದಿಸಿಲ್ಲ. ಸಚಿವ ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೆ ಸಮಯ ನಿಗದಿ ಪಡಿಸಬೇಕಿದೆ’ ಎಂದುಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ADVERTISEMENT

‘ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಾಜ ನಮ್ಮದಲ್ಲ. ಕೊಡಗಿನ ಕುರುಬರು ಈಗಾಗಲೇ ಎಸ್‌ಟಿ ಪಟ್ಟಿಯಲ್ಲಿ ಇರುವುದರಿಂದ ಅದನ್ನೇ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು. ಹೀಗಾಗಿ, ಕುಲಶಾಸ್ತ್ರೀಯ ಅಧ್ಯಯನದ ಅಗತ್ಯ ಇಲ್ಲ’ ಎಂದೂ ಪ್ರತಿಪಾದಿಸಿದರು.

‘70 ವರ್ಷಗಳಿಂದ ಕುರುಬರಿಗೆ ಮೀಸಲಾತಿ ಪಡೆಯುವ ಸಂಬಂಧ ಯಾರೂ ಮಾತನಾಡದೆ, ಈಗ ಸಮಾಜದ ಗುರುಗಳು ಹೋರಾಟ ಆರಂಭಿಸಿದ ಬಳಿಕ ಎಲ್ಲರೂ ಎಚ್ಚೆತ್ತುಕೊಂಡಿರುವುದು ದುರ್ದೈವ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ‘ಹೋರಾಟದ ಕಾವು ಆರದ ರೀತಿಯಲ್ಲಿ ಹೋರಾಟ ಮುಂದುವರಿಯಬೇಕಿದೆ’ ಎಂದರು.

‘ಕುರುಬರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬಾರದೆಂಬ ಸಂಸದ ವಿ .ಶ್ರೀನಿವಾಸ್ ಪ್ರಸಾದ್ ನೀಡಿರುವ ಹೇಳಿಕೆ ಖಂಡನಾರ್ಹ’ ಎಂದು ಸಮಿತಿಯ ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ ಹೇಳಿದರು.

ವಿಧಾನಪರಿಷತ್ ಸದಸ್ಯ ಎಚ್‌. ವಿಶ್ವನಾಥ್‌, ‘ಪ್ರತ್ಯೇಕ ಹೋರಾಟ, ಧರಣಿ ಬೇಡ. ಸರ್ಕಾರ ಜಾತಿಗಣತಿ ವರದಿ ಅಂಗೀಕರಿಸಿ ಮೀಸಲಾತಿ ಜಾರಿಗೊಳಿಸಬೇಕು. ಮೀಸಲಾತಿ ಕುರಿತು ರಾಜ್ಯ ಸರ್ಕಾರದ ಉದ್ದೇಶಿತ ಸಮಿತಿ ರಚನೆಯೂ ಅಗತ್ಯ ಇಲ್ಲ. ಸಂಘಟಿತ ಹೋರಾಟ ಗಟ್ಟಿಯಾಗಬೇಕು’
ಎಂದರು.

‘ಪಾದಯಾತ್ರೆ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಏಪ್ರಿಲ್ 3ರಂದು ಅದರ ಲೆಕ್ಕ ಪತ್ರ ನೀಡುವೆ’ ಎಂದು ಸಭೆಯಲ್ಲಿ ಕಾಗಿನೆಲೆ ಕನಕಗುರು ಪೀಠದ ನಿರಂನಾನಂದಪುರಿ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.