ADVERTISEMENT

ಕುರುಬ ಸಮಾಜ ಅಧಿಕಾರಕ್ಕೆ ಬೇಕು, ಕಾರ್ಯಕ್ರಮಕ್ಕೆ ಬೇಡ: ಎಚ್.ಎಂ. ರೇವಣ್ಣ 

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 20:53 IST
Last Updated 23 ಜುಲೈ 2025, 20:53 IST
ಎಚ್.ಎಂ. ರೇವಣ್ಣ
ಎಚ್.ಎಂ. ರೇವಣ್ಣ   

ರಾಜರಾಜೇಶ್ವರಿನಗರ: ‘ಅಧಿಕಾರಕ್ಕಾಗಿ ಕುರುಬ ಸಮಾಜದ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡುವ ನಾವು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಿಂದ ದೂರ ಉಳಿಯುವುದು ಎಷ್ಟು ಸರಿ’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಶ್ನಿಸಿದರು.

‘ಕಾಗಿನೆಲೆ ಮಹಾಸಂಸ್ಥಾನ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿಲ್ಲ ಎಂಬ ಕಾರಣಕ್ಕೆ ಕುರುಬ ಸಮಾಜದ ಅನೇಕ ನಾಯಕರು, ಇತ್ತ ಮುಖ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅತಿಹೆಚ್ಚು ಪ್ರತಿಭಾವಂತ ಹೆಣ್ಣುಮಕ್ಕಳು ಕುರುಬ ಸಮಾಜದಲ್ಲಿದ್ದಾರೆ. ತಾವು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಬೇಕಾಗಿದ್ದು, ಸತತ ಪರಿಶ್ರಮದಿಂದ ಎಲ್ಲಾ ರಂಗಗಳಲ್ಲಿಯೂ ಮುಂದೆ ಬರಬೇಕು. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 70 ಕ್ಷೇತ್ರಗಳು ಮಹಿಳಾ ಮೀಸಲಾಗಲಿದ್ದು, ಆ ಕ್ಷೇತ್ರದಲ್ಲಿಯೂ ಸ್ಪರ್ಧಿಸಿ ಸಾಧನೆ ಮಾಡಬೇಕು. ರಾಜಕೀಯ ಯಾರ ಮನೆಯ ಸ್ವತ್ತಲ್ಲ, ಎಲ್ಲರೂ ಸ್ಪರ್ದಿಸಬಹುದು’ ಎಂದರು.

ADVERTISEMENT

‘ಕುರುಬ ಸಮಾಜದಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರು. ಹೆಮ್ಮೆಯಿಂದ ನಾವು ಕುರುಬರು ಎಂದು ಹೇಳಿಕೊಳ್ಳಬೇಕು. ಸಮಾಜದ ಋಣವನ್ನು ತೀರಿಸುವ ಜೊತೆಗೆ, ಶೋಷಿತ, ದಲಿತ, ಹಿಂದುಳಿದ ಜನಾಂಗದ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗುವ ಮೂಲಕ ಸಮಸಮಾಜವನ್ನು ನಿರ್ಮಾಣ ಮಾಡಬೇಕಾಗಿದೆ’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠಾಧ್ಯಕ್ಷ ನಿರಂಜನಾ ನಂದಪುರಿ ಸ್ವಾಮೀಜಿ ಹೇಳಿದರು.

ಬಿಬಿಎಂಪಿ ಮಾಜಿ ಸದಸ್ಯ ಡಾ.ಎಸ್. ರಾಜು, ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ, ಕುಂಚಿಟಿಗ‌ಮಠದ ಶಾಂತವೀರ ಸ್ವಾಮೀಜಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ, ಲೋಕೋಪಯೋಗಿ ಇಲಾಖೆಯ ರಿಜಿಸ್ಟ್ರರ್ ಸೋಮಶೇಖರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.