ADVERTISEMENT

‘ಸ್ಥಳೀಯ ಭಾಷೆಗಳು ಆಡಳಿತ ಭಾಷೆಯ ಕೊಂಡಿ’

​ಪ್ರಜಾವಾಣಿ ವಾರ್ತೆ
Published 22 ಮೇ 2021, 4:10 IST
Last Updated 22 ಮೇ 2021, 4:10 IST

ಬೆಂಗಳೂರು: ‘ರಾಜ್ಯದಲ್ಲಿ ಕನ್ನಡ ಭಾಷೆ ಸಾರ್ವಭೌಮ. ವಲಯವಾರು ಸ್ಥಳೀಯ ಭಾಷೆಗಳು ಆಡಳಿತ ಭಾಷೆಗೆ ಕೊಂಡಿ ಇದ್ದಂತೆ’ ಎಂದುಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.

ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಶುಕ್ರವಾರ ಹಮ್ಮಿಕೊಂಡಿದ್ದ ‘ಒಳನುಡಿಗಳ ಒಳ್ನುಡಿ: ಜಾಲಗೋಷ್ಠಿ ಸರಣಿ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕದಲ್ಲಿ ಸುಮಾರು 56 ಭಾಷೆಗಳಿವೆ. ಅವುಗಳಲ್ಲಿ ಕುವೆಂಪು ಭಾಷಾ ಪ್ರಾಧಿಕಾರ 13 ಭಾಷೆಗಳ ಬಗ್ಗೆ ಸರಣಿ ಜಾಲಗೋಷ್ಠಿ ಹಮ್ಮಿಕೊಂಡಿದೆ. ವ್ಯವಹಾರ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿಈ ಸ್ಥಳೀಯ ಭಾಷೆಗಳ ಪ್ರಭಾವವನ್ನು ಕಾಣಬಹುದು’ ಎಂದರು.

ADVERTISEMENT

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್, ‘ಒಂದು ಭಾಷೆ ಸಮೃದ್ಧವಾಗಿ ಬೆಳೆಯ ಬೇಕಾದರೆ, ಭಾಷೆಗಳ ವಿನಿಮಯದ ಕೆಲಸವಾಗಬೇಕು. ಆಗ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ’ ಎಂದರು.

‘ಕೊಡವ, ತುಳು ಸೇರಿದಂತೆ ಅನೇಕ ಸ್ಥಳೀಯ ಭಾಷೆಗಳು ಕನ್ನಡಕ್ಕೆ ಅಂಟಿಕೊಂಡಿವೆ. ಅವು ಒಂದಕ್ಕೊಂದು ಬೆಸೆದುಕೊಂಡಿವೆ. ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ಕೇಂದ್ರೀಕರಿಸಿ, ಕಾರ್ಯಕ್ರಮ ರೂಪಿಸಲಾಗುವುದು’.

‘ಸ್ಥಳೀಯ ಭಾಷೆಗಳು ಹಾಗೂ ಅಲ್ಲಿನ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಕ್ರಮಗಳನ್ನು ಪ್ರಾಧಿಕಾರದಿಂದ ರೂಪಿಸಲಾಗುವುದು. ಅದರ ಪೂರ್ವಭಾವಿಯಾಗಿ ಕೊಡವ, ತುಳು, ಕೊಂಕಣಿ, ಕುಂದಾಪುರ ಭಾಷೆಗಳಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳನ್ನು ಈಗ ಹಮ್ಮಿಕೊಳ್ಳಲಾಗಿದೆ’ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಪಾರ್ವತಿ ಅಯ್ಯಪ್ಪ ಹಾಗೂ ಇತರರು ಭಾಗವಹಿಸಿದ್ದರು. ಜಾಲಗೋಷ್ಠಿ ಸರಣಿಯು ಜೂನ್ 2ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.