ADVERTISEMENT

ತಾತ್ವಿಕ ಸಂದೇಶ ಸಾರುವ ಮಲೆಗಳಲ್ಲಿ ಮದುಮಗಳು: ಸಾಹಿತಿ ಕೆ.ವೈ.ನಾರಾಯಣಸ್ವಾಮಿ

ಪುಸ್ತಕ ಪ್ರಾಧಿಕಾರದಿಂದ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 13:58 IST
Last Updated 31 ಡಿಸೆಂಬರ್ 2025, 13:58 IST
ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಕುಲಪತಿ ಬಿ.ರಮೇಶ್, ಮಾನಸ, ಕೆ.ವೈ. ನಾರಾಯಣಸ್ವಾಮಿ, ಕೆ.ಎಂ. ಗಾಯತ್ರಿ, ಕೆ.ಬಿ. ಕಿರಣ್ ಸಿಂಗ್ ಅವರು ಪುಷ್ಪನಮನ ಸಲ್ಲಿಸಿದರು        ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಕುಲಪತಿ ಬಿ.ರಮೇಶ್, ಮಾನಸ, ಕೆ.ವೈ. ನಾರಾಯಣಸ್ವಾಮಿ, ಕೆ.ಎಂ. ಗಾಯತ್ರಿ, ಕೆ.ಬಿ. ಕಿರಣ್ ಸಿಂಗ್ ಅವರು ಪುಷ್ಪನಮನ ಸಲ್ಲಿಸಿದರು        ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನುಷ್ಯ ಸಂಬಂಧಗಳನ್ನು ಶೋಧಿಸುತ್ತಲೇ ಪೂರ್ಣದೃಷ್ಟಿಯನ್ನು ಬೆರೆಸಿದ ತಾತ್ವಿಕತೆಯ ಸಂದೇಶವನ್ನು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಸಾರುತ್ತದೆ’ ಎಂದು ಸಾಹಿತಿ ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರವು ಮನಮೋಹನ್‌ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ‘ಕುವೆಂಪು ಅವರ ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಪಾತ್ರಾವಲೋಕನ ಕುರಿತು ಉಪನ್ಯಾಸ ನೀಡಿದರು.

‘ಕುವೆಂಪು ಅವರದ್ದು ಪ್ರಕೃತಿಯೊಂದಿಗಿನ ಮಿಳಿತ ಸಂಬಂಧ. ಅದನ್ನು ತಮ್ಮ ಬಹುತೇಕ ಕೃತಿಗಳಲ್ಲಿ ಚಿತ್ರಿಸಿದ್ದಾರೆ. ಮನುಷ್ಯ ಸ್ವಭಾವಗಳು, ಭಾವನಾತ್ಮಕ ಏರುಪೇರುಗಳನ್ನು ಪಾತ್ರ, ಸನ್ನಿವೇಶಗಳ ಮೂಲಕ ಕುವೆಂಪು ಅವರು ಈ ಕಾದಂಬರಿಯಲ್ಲಿ ಕಟ್ಟಿ ಕೊಟ್ಟಿದ್ದಾರೆ’ ಎಂದರು.

ADVERTISEMENT

‘ಊಳಿಗಮಾನ್ಯ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಲೇ ತಳವರ್ಗದ ಬದುಕಿನ ಚೈತನ್ಯವನ್ನೂ ತಿಳಿಸುವ ಈ ಕಾದಂಬರಿ ನಿರಾಸೆ ಹುಟ್ಟಿಸುವ ಕಥನವಲ್ಲ. ಬದಲಿಗೆ ನಾಳಿನ ಬದುಕನ್ನು ನೋಡುವ ಜತೆಗೆ ಹೊಸ ದರ್ಶನವನ್ನು ನೀಡುತ್ತದೆ. ಕನ್ನಡ ಓದುಗರನ್ನು ಇಷ್ಟೊಂದು ಸೆಳೆದ ಮತ್ತೊಂದು ಕೃತಿ ಇಲ್ಲ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯತ್ರಿ ಮಾತನಾಡಿ, ‘ಕುವೆಂಪು ಅವರದ್ದು ಜಾಗತಿಕ ಮಟ್ಟದಲ್ಲಿ ನಿಲ್ಲುವಂತಹ ಸಾಹಿತ್ಯ. ಆದರ್ಶ ಪ್ರೀತಿ, ಬದುಕನ್ನು ವೈಚಾರಿಕ ಪ್ರಖರತೆಯೊಂದಿಗೆ ಕುವೆಂಪು ನಿರೂಪಿಸಿದರು. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿನ ಎಲ್ಲಾ ಪಾತ್ರಗಳು ನಮ್ಮ ಬದುಕಿನ ಪ್ರತಿಬಿಂಬದಂತೆಯೇ ಇವೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಬಿ.ರಮೇಶ್‌, ‘ಕುವೆಂಪು ಅವರ ವೈಚಾರಿಕ ಚಿಂತನೆಗಳು ನಮ್ಮ ಕಾಲದ ಹಲವು ಬಿಕ್ಕಟ್ಟುಗಳಿಗೆ ಮಾರ್ಗೋಪಾಯದಂತಿವೆ. ಅವರ ಕೃತಿಗಳನ್ನು ವೈಜ್ಞಾನಿಕವಾಗಿ ಗ್ರಹಿಸುವ ಕ್ರಮವನ್ನು ಯುವಕರು ಬೆಳೆಸಿಕೊಳ್ಳಬೇಕು. ಅವರ ಚಿಂತನೆಗಳು ಸರಳವಾಗಿ ಅರ್ಥವಾದರೆ ನಾವು ಬಿಡುಗಡೆ ಪಡೆಯಲು ದಾರಿಯಾಗಲಿದೆ’ ಎಂದು ತಿಳಿಸಿದರು.

ಪ್ರಾಧಿಕಾರದ ಅಧ್ಯಕ್ಷ ಮಾನಸ, ರಿಜಿಸ್ಟ್ರಾರ್‌ ಕೆ.ಬಿ. ಕಿರಣ್‌ಸಿಂಗ್‌, ರಂಗಕರ್ಮಿ ಸಿ.ಬಸವಲಿಂಗಯ್ಯ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ತಾಂಡವಗೌಡ, ಸಿ.ಎನ್‌.ಮಂಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.