ADVERTISEMENT

ಬಿಡಿಎ ಯೋಜನೆಗಳಿಗೆ ಆರ್ಥಿಕ ಕೊರತೆ: ಹಲವು ಯೋಜನೆಗಳು ಕುಂಠಿತ

ಬ್ಯಾಂಕ್‌ ಖಾತೆಯಲ್ಲಿ ಕೇವಲ ₹ 40 ಕೋಟಿ

ನವೀನ್‌ ಮಿನೇಜಸ್‌
Published 12 ನವೆಂಬರ್ 2023, 20:29 IST
Last Updated 12 ನವೆಂಬರ್ 2023, 20:29 IST
<div class="paragraphs"><p>ಬಿಡಿಎ</p></div>

ಬಿಡಿಎ

   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಣಕಾಸಿನ ಕೊರತೆ ಎದುರಾಗಿದ್ದು, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕಾಗುವ ಸಾಧ್ಯತೆಯಿದೆ.

ಬಿಡಿಎ ಮುಂದೆ ಹಲವು ಯೋಜನೆಗಳಿದ್ದರೂ ಬ್ಯಾಂಕ್‌ ಖಾತೆಯಲ್ಲಿ ₹ 40 ಕೋಟಿಯಷ್ಟೇ ಹಣ ಇದೆ. ಸದ್ಯ ಪ್ರಗತಿಯಲ್ಲಿರುವ ಬಡಾವಣೆಗಳ ನಿರ್ಮಾಣ ನಿರ್ಮಾಣ, ಮೇಲ್ಸೇತುವೆ ಹಾಗೂ ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಉಂಟಾಗಿದೆ.

ADVERTISEMENT

ಪ್ರಮುಖ ವಸತಿ ಯೋಜನೆಗಳಾದ ನಾಡಪ್ರಭು ಕೆಂಪೇಗೌಡ ಬಡಾವಣೆ, ಶಿವರಾಮ ಕಾರಂತ ಬಡಾವಣೆ ಹಾಗೂ ಹೆಬ್ಬಾಳ ಮೇಲ್ಸೇತುವೆ ಲೂಪ್‌ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಬಿಡಿಎಗೆ ಸಾಧ್ಯವಾಗುತ್ತಿಲ್ಲ.

ಶಿವರಾಮ ಕಾರಂತ ಬಡಾವಣೆಯಲ್ಲಿ 30 ಸಾವಿರ ನಿವೇಶನ ಹಂಚಿಕೆ, 2,500ಕ್ಕೂ ಹೆಚ್ಚು ಫ್ಯ್ಲಾಟ್‌ಗಳ ಮಾರಾಟ ಹಾಗೂ ಮೂಲ ನಿವೇಶನಗಳ ಹರಾಜಿನಿಂದ ₹3 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷಿತ ಸಂಪನ್ಮೂಲ ಕ್ರೋಡೀಕರಣವಾಗಿಲ್ಲ ಎನ್ನುತ್ತವೆ ಮೂಲಗಳು.

ಬಿಡಿಎ ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬನಶಂಕರಿ 6ನೇ ಹಂತ, ಅಂಜನಾಪುರ, ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ₹400 ಕೋಟಿ, ಶಿವರಾಮ ಕಾರಂತ ಬಡಾವಣೆಯ ಕಾಮಗಾರಿಗೆ ಅಂದಾಜು ₹ 2 ಸಾವಿರ ಕೋಟಿ, ಕೆಂಪೇಗೌಡ ಬಡಾವಣೆ ಕಾಮಗಾರಿಗೆ ಅನುದಾನ ಅಗತ್ಯವಿದೆ.

ಪ್ರಗತಿಯಲ್ಲಿರುವ ಕಾಮಗಾರಿಗಳ ಬಿಲ್‌ಗಳನ್ನು ಪಾವತಿಸಿದ ನಂತರ ಬಿಡಿಎಗೆ ಆರ್ಥಿಕ ತೊಂದರೆ ಆರಂಭವಾಯಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸರ್ಕಾರದ ಬದಲಾವಣೆ ಆಗಿದ್ದರಿಂದ ಬಿಡಿಎ ತ್ವರಿತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದು ಸಹ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹಿನ್ನಡೆ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಸುಪ್ರೀಂ ಕೋರ್ಟ್‌ ನೇಮಿಸಿರುವ ಎ.ವಿ.ಚಂದ್ರಶೇಖರ್‌ ಸಮಿತಿ, ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅರ್ಜಿದಾರರಿಗೆ ನಿವೇಶನ ಮಂಜೂರು ಮಾಡುವಂತೆ ಅನುಮತಿ ನೀಡಿದೆ. ಆ ಕೆಲಸವೂ ಇನ್ನಷ್ಟೇ ನಡೆಯಬೇಕಿದೆ.

ಬಿಡಿಎ ಫ್ಲ್ಯಾಟ್‌ಗಳ ಮಾರಾಟವು ಹಲವು ತಿಂಗಳಿಂದ ನಡೆದಿಲ್ಲ. ಆರು ತಿಂಗಳ ಬಳಿಕ 123 ನಿವೇಶನಗಳ ಹರಾಜು ಹಾಕಲು ಸೂಚನೆ ಸಿಕ್ಕಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

‘ಆದಾಯ ಕ್ರೋಡೀಕರಣಕ್ಕೆ ಹಲವು ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ತೊಡಕಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಬಡಾವಣೆ ಅಭಿವೃದ್ಧಿ ಪಡಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಿಡಿಎ ಆಯುಕ್ತ ಎನ್‌. ಜಯರಾಮ್‌ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

‘ನಿವೇಶನದಾರರು ಮನೆ ನಿರ್ಮಿಸಿದ್ದರೂ ಯುಜಿಡಿ ಸಂಪರ್ಕ ಸಾಧ್ಯವಾಗಿಲ್ಲ. ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕವೂ ಸಿಕ್ಕಿಲ್ಲ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಫೋರಂನ ಸೂರ್ಯ ಕಿರಣ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.