ADVERTISEMENT

ಪೀಣ್ಯ ಕೈಗಾರಿಕಾ ಪ್ರದೇಶ: ‘ಡಾಂಬರೀಕರಣಕ್ಕೆ ಶೀಘ್ರ ಚಾಲನೆ’

ಅಭಿವೃದ್ಧಿಗೆ ಅನುದಾನ ಕೊರತೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 20:31 IST
Last Updated 3 ಜನವರಿ 2021, 20:31 IST
ಶಾಸಕ ಆರ್‌.ಮಂಜುನಾಥ್‌ ಅವರನ್ನು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಅರಸಪ್ಪ ಸನ್ಮಾನಿಸಿದರು
ಶಾಸಕ ಆರ್‌.ಮಂಜುನಾಥ್‌ ಅವರನ್ನು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಅರಸಪ್ಪ ಸನ್ಮಾನಿಸಿದರು   

ಬೆಂಗಳೂರು:‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಳಚರಂಡಿ ಕಾಮಗಾರಿ ಪೂರ್ಣವಾಗಿದ್ದು, ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು’ ಎಂದು ಶಾಸಕಆರ್.ಮಂಜುನಾಥ್ ತಿಳಿಸಿದರು.

ಪೀಣ್ಯ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಪೀಣ್ಯ ಕೈಗಾರಿಕಾ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಪೀಣ್ಯ ಕೈಗಾರಿಕಾ ಪ್ರದೇಶವು ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿದೆ. ಇಲ್ಲಿನ ಕಂಪನಿಗಳು ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಕೋಟಿಗಟ್ಟಲೆ ತೆರಿಗೆ ಪಾವತಿಸುತ್ತಿವೆ. ಆದರೆ, ಇಲ್ಲಿನ ಕೈಗಾರಿಕೋದ್ಯಮಿಗಳ ಪಾಡು ಹೇಳತೀರದು. ಈ ಭಾಗದ ರಸ್ತೆಗಳು ಗುಂಡಿ ಬಿದ್ದಿವೆ. ಮಳೆ ಬಂದಾಗ ನೀರು ಕಾರ್ಖಾನೆಗಳಿಗೆ ನುಗ್ಗಿ ಮಾಲೀಕರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. ರಾಜ್ಯ ಸರ್ಕಾರದ ಅಸಹಕಾರದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಈ ಭಾಗದಲ್ಲಿ ಕಸದ ಸಮಸ್ಯೆ, ಬೀದಿದೀಪಗಳ ಸಮಸ್ಯೆ ಹಾಗೂ ಕೈಗಾರಿಕೆಗಳಿಗೆ ಮಾರ್ಷಲ್‌ಗಳ ಕಿರುಕುಳ ತಪ್ಪಿಸಲು ಶೀಘ್ರವೇ ಸಭೆ ಕರೆಯಿರಿ. ಸರಿಯಾಗಿ ಕೆಲಸ ಮಾಡದವರ ವಿರುದ್ಧ‌ ಶಿಸ್ತು ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ದಾಸರಹಳ್ಳಿ ವಲಯ ಪಾಲಿಕೆ ಜಂಟಿ ಆಯುಕ್ತ ನರಸಿಂಹಮೂರ್ತಿ,ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್, ಕರ್ನಾಟಕ ಸಣ್ಣ ಕೈಗಾರಿಕಾ ಸಂಘಗಳ ಅಧ್ಯಕ್ಷ ಅರಸಪ್ಪ, ಉದ್ಯಮಿಗಳು ಹಾಗೂ ಕೈಗಾರಿಕಾ ಸಂಘದ ಮಲ್ಲೇಶ್ ಗೌಡ, ಮಂಜುನಾಥ್, ಗೋವಿಂದಪ್ಪ, ಆರ್.ಕೆ.ಕುಮಾರ್, ಮುರಳೀಧರ್ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.