ADVERTISEMENT

ಖಾದಿ ವಸ್ತ್ರಗಳ ಮೆರುಗು

ರಿಯಾಯಿತಿ ದರದಲ್ಲಿ ಉತ್ಪನ್ನಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 4:52 IST
Last Updated 17 ಜನವರಿ 2020, 4:52 IST
ಉತ್ಸವದಲ್ಲಿ ಬಿ.ಎಸ್.ಯಡಿಯೂರಪ್ಪ ಕೈ ಮಗ್ಗ ಯಂತ್ರದಲ್ಲಿ ಬಟ್ಟೆ ನೇಯ್ದರು – ಪ್ರಜಾವಾಣಿ ಚಿತ್ರ
ಉತ್ಸವದಲ್ಲಿ ಬಿ.ಎಸ್.ಯಡಿಯೂರಪ್ಪ ಕೈ ಮಗ್ಗ ಯಂತ್ರದಲ್ಲಿ ಬಟ್ಟೆ ನೇಯ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿವಿಧ ರಾಜ್ಯಗಳಲ್ಲಿ ತಯಾರಾದ ಅಪ್ಪಟಖಾದಿವಸ್ತ್ರಗಳ ಮಾರಾಟ ಮತ್ತು ಪ್ರದರ್ಶನದ ಖಾದಿ ಉತ್ಸವಕ್ಕೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಆಯೋಜಿಸಿರುವ ಉತ್ಸವವು ಫೆ.14ರವರೆಗೆ ನಡೆಯಲಿದೆ. ಬೆಳಿಗ್ಗೆ9ರಿಂದ ರಾತ್ರಿ 9 ಗಂಟೆವರೆಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮಳಿಗೆಗಳಲ್ಲಿಯುವಜನತೆಗೆ ಇಷ್ಟವಾಗುವ ಶಾರ್ಟ್‌ ಜುಬ್ಬಾ, ಕೋಟ್,ತರಹೇವಾರಿ ವಿನ್ಯಾಸದ ಕುರ್ತಾಗಳು ಸೇರಿದಂತೆ ಬೇಸಿಗೆಗೆ ಹಿತ ನೀಡುವ ವಿವಿಧ ಬಗೆಯ ಉಡುಪುಗಳ ದೊಡ್ಡ ಸಂಗ್ರಹವಿದೆ. ದೇಸಿ ಕೈಮಗ್ಗದಲ್ಲಿ ತಯಾರಾದ ಅಪ್ಪಟ ರೇಷ್ಮೆ ಸೀರೆಗಳು, ಉಣ್ಣೆ ಉತ್ಪನ್ನಗಳು, ಒಡಿಶಾದ ಕಾಟನ್, ಸಿಲ್ಕ್‌ ಸೀರೆಗಳು, ಆಕರ್ಷಕ ದುಪಟ್ಟಾಗಳು,ಲಂಗ–ದಾವಣಿ, ಟವೆಲ್‌, ಜಮಖಾನಾ, ಮ್ಯಾಟ್‌, ಕಂಬಳಿ ಸೇರಿದಂತೆ ಹಲವು ಉತ್ಪನ್ನಗಳಿವೆ.

ADVERTISEMENT

ಉತ್ಸವದ ಪ್ರವೇಶ ದ್ವಾರದಲ್ಲಿಯೇಹರಿಹರ ಚರಕ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದಿಂದ ಕೈ ಮಗ್ಗ ಯಂತ್ರ ಹಾಗೂ ಚರಕವನ್ನು ಪ್ರದರ್ಶನಕ್ಕಿಡಲಾಗಿದೆ.ಖಾದಿ ಬಟ್ಟೆ ತಯಾರಿಕೆಯ ಬಗ್ಗೆ ಮಾಹಿತಿಯನ್ನೂ ಒದಗಿಸಲಾಗುತ್ತಿದೆ. ಕಿವಿಯೋಲೆ, ಪಾದರಕ್ಷೆಗಳು, ಬ್ಯಾಗ್‌ಗಳು, ಗೃಹ ಅಲಂಕಾರಿಕ ವಸ್ತುಗಳು, ಹೂವಿನ ಕುಂಡಗಳೂ ಕಾಣಸಿಗುತ್ತವೆ.

ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಮಲೆನಾಡಿನ ಮಿಡಿ ಉಪ್ಪಿನಕಾಯಿ, ಕೇರಳದ ನೇಂದ್ರ ಬಾಳೆಯ ಚಿಪ್ಸ್, ಕೊಬ್ಬರಿ ಎಣ್ಣೆಯಲ್ಲಿ ಕರಿದ ಕರಾವಳಿ ತಿನಿಸುಗಳು, ಬೆಳಗಾವಿಯ ಸಿಹಿ ಕುಂದಾ, ಗೋಕಾಕ್ ಕರದಂಟು ಹಾಗೂ ದೇಸಿ ತಿನಿಸುಗಳು ಇವೆ.

ನಿಗಮ ಆರಂಭಿಸಿ

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಮಾತನಾಡಿ, ‘ಶ್ರೀಮಂತ ಉದ್ಯಮಿಗಳಿಗೆ ಸರ್ಕಾರ ಮಣೆ ಹಾಕುತ್ತಿದೆ. ಅವರಿಗೆ ತೆರಿಗೆ ವಿನಾಯಿತಿ, ನೀರು ಹಾಗೂ ಜಾಗ ನೀಡಲಾಗುತ್ತಿದೆ. ಸ್ವದೇಶಿ, ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವವರೇ ಖಾದಿಗೆ ಅಷ್ಟಾಗಿ ಆದ್ಯತೆ ನೀಡುತ್ತಿಲ್ಲ. ಖಾದಿ ಉದ್ಯಮವನ್ನು ಬೆಳೆಸಲು ರಾಜ್ಯದಲ್ಲಿ ಪ್ರತ್ಯೇಕವಾಗಿ ಖಾದಿ ಅಭಿವೃದ್ಧಿ ನಿಗಮ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.