ADVERTISEMENT

837 ಕೆರೆಗಳ ಜಾಗ ಕಬಳಿಕೆ: 4,500 ಎಕರೆ ಕೆರೆ ಪ್ರದೇಶ ಒತ್ತುವರಿ

ಜಿಲ್ಲಾಡಳಿತದ ಸಮೀಕ್ಷೆಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:49 IST
Last Updated 28 ಜೂನ್ 2021, 21:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 837 ಕೆರೆಗಳ 4,500 ಎಕರೆ ಪ್ರದೇಶ ಒತ್ತುವರಿಯಾಗಿರುವುದು ಜಿಲ್ಲಾಡಳಿತ ನಡೆಸಿದ ಪ್ರಾಥಮಿಕ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಜಿಲ್ಲೆಯಲ್ಲಿ 837 ಕೆರೆಗಳು 22,810 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದವು. ಈ ಪೈಕಿ ಶೇ 20ರಷ್ಟು ಪ್ರದೇಶ ಒತ್ತುವರಿಯಾಗಿದೆ.91 ಕೆರೆಗಳು ಒತ್ತುವರಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಜಿಲ್ಲೆಯಲ್ಲಿನ ಎಲ್ಲ ಕೆರೆಗಳ ಸಮೀಕ್ಷೆ ನಡೆಸಬೇಕು ಎಂದು ಜೂನ್‌ 15ರಂದು ಆದೇಶ ಮಾಡಿದ್ದು, ಒತ್ತುವರಿ ಆಗಿರುವ ಪ್ರದೇಶದ ವಿವರ ದಾಖಲಿಸುವಂತೆ ಸೂಚಿಸಲಾಗಿತ್ತು. ಬಿಬಿಎಂಪಿ, ಬಿಡಿಎ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳ ಸಮೀಕ್ಷೆಯೂ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

ADVERTISEMENT

‘ಕೆರೆಗಳ ತೀರದಲ್ಲಿ ಕೆಲವು ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದರೆ, ಬಡವರು ಮತ್ತು ನಿರ್ವಸಿತರು ಕೆರೆಯ ಪಕ್ಕದಲ್ಲಿ ಶೆಡ್‌ಗಳನ್ನು ಹಾಕಿಕೊಂಡು ಇದ್ದಾರೆ. ಈಗ ತಾತ್ಕಾಲಿಕವಾಗಿ ಈ ಜನ ಅಲ್ಲಿ ನೆಲೆಸಿದ್ದಾರೆ ಎಂದುಕೊಂಡರೂ, ಇವರೆಲ್ಲ ಅಲ್ಲಿಯೇ ಮನೆ ಕಟ್ಟಿದರೆ ಮುಂದೆ ಸಮಸ್ಯೆಯಾಗಲಿದೆ. ಜಲಮೂಲಗಳೂ ಕಲುಷಿತಗೊಳ್ಳಲಿವೆ. ಮಾನವ ಹಕ್ಕುಗಳನ್ನೂ ಗಮನದಲ್ಲಿರಿಸಿಕೊಂಡು ಒತ್ತುವರಿ ತೆರವು ಕಾರ್ಯ ಆರಂಭಿಸಲಾಗುವುದು’ ಎಂದು ಹೇಳಿದರು.

‘ಈ ಕುರಿತು ಇನ್ನೆರಡು ದಿನಗಳಲ್ಲಿ ಸಭೆ ನಡೆಯಲಿದೆ. ಕೆರೆಯ ಬಳಿಯ ಭೂಮಿಯ ಮಾಲೀಕತ್ವ ವಿವರ ಮತ್ತು ಕಟ್ಟಡ ನಿರ್ಮಾಣದ ದಿನಾಂಕ ಮತ್ತಿತರ ಅಂಶಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದೂ ಹೇಳಿದರು.

‘ಸರ್ಕಾರ ಮತ್ತು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಗಳ ಮೂಲಕ ಕೆರೆಗಳ ಸಂರಕ್ಷಣೆ ಕಾರ್ಯ ಕೈಗೆತ್ತಿಕೊಳ್ಳುವ ಚಿಂತನೆ ಇದೆ. ಕೆರೆಗಳ ಸುತ್ತ ತಂತಿ ಬೇಲಿ ಹಾಕುವುದು ಸೇರಿದಂತೆ ಅವುಗಳ ರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

125 ಕೆರೆಗಳು ‘ಅನಾಥ’: ಒತ್ತುವರಿಗೆ ಒಳಗಾಗಿರುವ 837 ಕೆರೆಗಳ ಪೈಕಿ 125 ಕೆರೆಗಳಿಗೆ ‘ವಾರಸುದಾರರೇ’ ಇಲ್ಲ. ಅಂದರೆ, ಈ ಕೆರೆಗಳ ನಿರ್ವಹಣೆ ಯಾವ ಸ್ಥಳೀಯ ಸಂಸ್ಥೆ ಅಥವಾ ಪಂಚಾಯಿತಿಗೆ ಸೇರಿದೆ ಎಂಬ ಬಗ್ಗೆ ಸ್ಪಷ್ಟತೆಯೇ ಇಲ್ಲ. ಇಂತಹ ಅಸ್ಪಷ್ಟಗಳ ಕಾರಣದಿಂದಲೇ ಬಹುತೇಕ ಕೆರೆಗಳು ಕಲುಷಿತಗೊಳ್ಳುತ್ತಿವೆಯಲ್ಲದೆ, ಒತ್ತುವರಿಗೂ ಒಳಗಾಗುತ್ತಿವೆ. ಮುಂದಿನ ಸಭೆಯಲ್ಲಿ ಈ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಜಿಲ್ಲೆಯಲ್ಲಿ ಕೆರೆ ಒತ್ತುವರಿ ವಿವರ
ತಾಲ್ಲೂಕು;
ಒತ್ತುವರಿಯಾದ ಕೆರೆಗಳು
ಆನೇಕಲ್‌; 223
ಬೆಂಗಳೂರು ದಕ್ಷಿಣ; 188
ಬೆಂಗಳೂರು ಉತ್ತರ; 122
ಬೆಂಗಳೂರು ಉತ್ತರ (ಹೆಚ್ಚುವರಿ); 116
ಬೆಂಗಳೂರು ಪೂರ್ವ; 95

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.