ADVERTISEMENT

ಕೊರೊನಾ ಸೋಂಕು | ಲಾಲ್‍ಬಾಗ್ ಫಲಪುಷ್ಪ ಪ್ರದರ್ಶನ ರದ್ದು

ಮುನ್ನೆಚ್ಚರಿಕಾ ಕ್ರಮವಾಗಿ ತೋಟಗಾರಿಕೆ ಇಲಾಖೆ ನಿರ್ಧಾರ

ಮನೋಹರ್ ಎಂ.
Published 4 ಜುಲೈ 2020, 22:40 IST
Last Updated 4 ಜುಲೈ 2020, 22:40 IST
ಬೆಂಗಳೂರಿನ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಕಳೆದ ಜನವರಿಯಲ್ಲಿ ‘ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ’ ಮತ್ತು ಗಣರಾಜ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘ ಆಯೋಜಿಸಿದ್ದ 211ನೇ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ವೇಷ ದರಿಸಿದ್ದ ಪುಟಾಣಿಗಳು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದರು. -ಪ್ರಜಾವಾಣಿ ಚಿತ್ರ/ ರಂಜು ಪಿ.
ಬೆಂಗಳೂರಿನ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಕಳೆದ ಜನವರಿಯಲ್ಲಿ ‘ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ’ ಮತ್ತು ಗಣರಾಜ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘ ಆಯೋಜಿಸಿದ್ದ 211ನೇ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ವೇಷ ದರಿಸಿದ್ದ ಪುಟಾಣಿಗಳು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದರು. -ಪ್ರಜಾವಾಣಿ ಚಿತ್ರ/ ರಂಜು ಪಿ.   

ಬೆಂಗಳೂರು: ಲಾಲ್‍ಬಾಗ್ ಉದ್ಯಾನದಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರದ್ದುಪಡಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.

ಶತಮಾನದಿಂದ ವರ್ಷಕ್ಕೆ ಎರಡು ಬಾರಿ (ಜನವರಿ ಹಾಗೂ ಆಗಸ್ಟ್‌ನಲ್ಲಿ) ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದ್ದ ಫಲಪುಷ್ಪ ಪ್ರದರ್ಶನವು ಇದೇ ರೀತಿ ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಒಮ್ಮೆ ರದ್ದಾಗಿತ್ತು.

ಮೈಸೂರು ಉದ್ಯಾನ ಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪ್ರತಿ ಬಾರಿಯ ಪ್ರದರ್ಶನದಲ್ಲೂ ಒಂದು ವಿಷಯದ ಆಧಾರದಲ್ಲಿ ಅಥವಾ ವ್ಯಕ್ತಿಗಳ ಸಂಸ್ಮರಣಾರ್ಥ ಅದಕ್ಕೆ ಸಂಬಂಧಿಸಿ ಕಲಾಕೃತಿಗಳನ್ನು ಹೂವುಗಳಲ್ಲಿ ರಚಿಸಲಾಗುತ್ತಿತ್ತು. ಕಳೆದ ಜನವರಿಯಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನವೇ ಕೊನೆಯದು.

ADVERTISEMENT

‘ಎಲ್ಲವೂ ವ್ಯವಸ್ಥಿತವಾಗಿದ್ದರೆ ಪ್ರದರ್ಶನ ಆಯೋಜಿಸುವ ಕುರಿತು ಈ ವೇಳೆಗೆ ಮೈಸೂರು ಉದ್ಯಾನ ಕಲಾ ಸಂಘ ಹಾಗೂ ಇಲಾಖೆಯೊಂದಿಗೆ ಸಭೆ ನಡೆಯಬೇಕಿತ್ತು.ಈ ಬಾರಿ ಪ್ರದರ್ಶನದ ವಿಷಯವನ್ನೂ (ಥೀಮ್) ಪ್ರಸ್ತಾಪ ಮಾಡಿಲ್ಲ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ತಿಳಿಸಿದರು.

‘ಪ್ರದರ್ಶನ ವೀಕ್ಷಿಸಲು ಲಕ್ಷಾಂತರ ಮಂದಿ ಉದ್ಯಾನದಲ್ಲಿ ಸೇರುತ್ತಾರೆ. ಪ್ರದರ್ಶನಕ್ಕೂ ಮುನ್ನ ಎರಡು ತಿಂಗಳಿನಿಂದ ಉದ್ಯಾನದಲ್ಲಿ ಸಿದ್ಧತೆಗಳು ನಡೆಯುತ್ತವೆ. ಆದರೆ, ಈ ಬಾರಿ ಪ್ರದರ್ಶನಕ್ಕೆ ಯಾವುದೇ ಸಿದ್ಧತೆಗಳನ್ನು ಕೈಗೊಂಡಿಲ್ಲ. ದಿನೇದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಸೋಂಕಿನ ನಡುವೆ ಪ್ರದರ್ಶನ ಆಯೋಜಿಸಿದರೂ ಜನರನ್ನು ನಿಯಂತ್ರಿಸುವುದು ಸವಾಲಿನ ಕೆಲಸ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಪರ್ಧೆಗಳೂ ರದ್ದು: ಪ್ರದರ್ಶನದ ವೇಳೆ ಆಯೋಜಿಸಲಾಗುತ್ತಿದ್ದ ಕಿರು ತೋಟಗಳ ಸ್ಪರ್ಧೆ, ಟೆರೇಸ್ ಗಾರ್ಡನ್ ಸ್ಪರ್ಧೆ, ಇಲಾಖಾವಾರು ಅಲಂಕಾರಿಕ ಸ್ಪರ್ಧೆ, ಇಕೆಬಾನ, ಪುಷ್ಪಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರ್ ಕಲೆ ಹಾಗೂ ಬೊನ್ಸಾಯ್‌ (ಕುಬ್ಜ ಮರ) ಸ್ಪರ್ಧೆ ಮತ್ತು ಪ್ರದರ್ಶನಗಳೂ ಈ ಬಾರಿ ಇರುವುದಿಲ್ಲ.

ನಷ್ಟ ತಪ್ಪಿದ್ದಲ್ಲ: ಕುಪ್ಪುಸ್ವಾಮಿ
‘ಕಳೆದ ಜನವರಿಯಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು ₹1.12 ಕೋಟಿ ಖರ್ಚಾಯಿತು. ಆದರೆ, ಪ್ರದರ್ಶನಕ್ಕೆ ನಿರೀಕ್ಷಿತ ಪ್ರಮಾಣದ ಜನ ಭೇಟಿ ನೀಡದೆ, ನಷ್ಟ ಅನುಭವಿಸಿದೆವು. ಕೊರೊನಾ ಇರುವುದರಿಂದ ಪ್ರದರ್ಶನ ವೀಕ್ಷಿಸಲೂ ಜನ ಬರುವುದಿಲ್ಲ. ಹಣ ಖರ್ಚು ಮಾಡಿ ಪ್ರದರ್ಶನ ಆಯೋಜಿಸಿದರೂ ನಷ್ಟ ತಪ್ಪಿದ್ದಲ್ಲ’ ಎನ್ನುತ್ತಾರೆ ಮೈಸೂರು ಉದ್ಯಾನ ಕಲಾ ಸಂಘದ ಖಜಾಂಚಿ ಕುಪ್ಪುಸ್ವಾಮಿ.

*
ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಸೇರುತ್ತಾರೆ. ಕೊರೊನಾ ಸೋಂಕು ಹರಡುತ್ತಿರುವುದರಿಂದ ಈ ಬಾರಿ ಪ್ರದರ್ಶನದ ಆಯೋಜನೆ ಸಾಧ್ಯವಿಲ್ಲ.
-ಕೆ.ಸಿ.ನಾರಾಯಣ ಗೌಡ, ತೋಟಗಾರಿಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.