ADVERTISEMENT

ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ ಕ್ಯಾನ್ಸರ್ ಪೀಡಿತ ಮಕ್ಕಳು

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:22 IST
Last Updated 27 ಜನವರಿ 2026, 15:22 IST
‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನ
‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನ   

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನವನ್ನು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ಪೀಡಿತ ಮಕ್ಕಳು ಕಣ್ತುಂಬಿಕೊಂಡರು. 

ಈ ಪ್ರದರ್ಶನಕ್ಕೆ ಸೋಮವಾರವೇ ತೆರೆ ಬಿದ್ದಿದ್ದರೂ, ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಲು ಸಂಸ್ಥೆಯು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಮಂಗಳವಾರ ವಿಶೇಷ ವೀಕ್ಷಣೆಯ ವ್ಯವಸ್ಥೆ ಮಾಡಿತ್ತು. ಮಕ್ಕಳು ಕಾಯಿಲೆಯ ನೋವು ಮರೆತು ಲಾಲ್‌ಬಾಗ್‌ನಲ್ಲಿ ಸಂಭ್ರಮಿಸಿದರು. ಬಣ್ಣ–ಬಣ್ಣದ ಹೂವುಗಳಲ್ಲಿ ಅನಾವರಣ ಮಾಡಲಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಗಾಥೆಯನ್ನು ವೀಕ್ಷಿಸಿದರು. 

‘ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಮಾನಸಿಕ ಹಾಗೂ ದೈಹಿಕ ಬಲ ಅಗತ್ಯ. ಫಲಪುಷ್ಪ ಪ್ರದರ್ಶನವು ಮನಸ್ಸಿಗೆ ನೆಮ್ಮದಿ ನೀಡಲಿದೆ. ಪ್ರಕೃತಿಯನ್ನು ಕಣ್ತುಂಬಿಕೊಂಡಾಗ ಮಕ್ಕಳಲ್ಲಿನ ಮಾನಸಿಕ ಒತ್ತಡವೂ ಕಡಿಮೆಯಾಗಲಿದೆ. ಆದ್ದರಿಂದ ಮಕ್ಕಳನ್ನು ಲಾಲ್‌ಬಾಗ್‌ಗೆ ಕರೆತರಲಾಯಿತು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಟಿ. ನವೀನ್ ತಿಳಿಸಿದರು. 

ADVERTISEMENT

‘ಎಲ್ಲ ಮಕ್ಕಳಂತೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು, ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡುವ ಮೂಲಕ ಪ್ರಕೃತಿಯ ವೈಭವ ಹಾಗೂ ಹೂಗಳ ಚಿತ್ತಾರ ಕಣ್ತುಂಬಿಕೊಂಡಿದ್ದಾರೆ. ಚಿಕಿತ್ಸೆಯಿಂದ ಮಾನಸಿಕವಾಗಿ ಕುಗ್ಗಿದ ಮಕ್ಕಳಿಗೆ ಈ ಪ್ರದರ್ಶನವು ಆತ್ಮಸ್ಥೈರ್ಯ ತುಂಬಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.