
ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸೋಮವಾರ ಬಂದಿದ್ದ ಜನ ಪ್ರಜಾವಾಣಿ ಚಿತ್ರ
Flower exhibition opens: 8.10 lakh people visit
ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ತೇಜಸ್ವಿ ವಿಸ್ಮಯ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. 13 ದಿನ ನಡೆದ ಈ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 8.10 ಲಕ್ಷ ಜನರು ಭೇಟಿ ನೀಡಿದ್ದು, ₹2.46 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
ಗಾಜಿನ ಮನೆಯ ಆವರಣದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಗಾಥೆಯನ್ನು ಬಣ್ಣ–ಬಣ್ಣದ ಹೂವುಗಳಲ್ಲಿ ಅನಾವರಣ ಮಾಡಲಾಗಿತ್ತು. ಜನವರಿ 14ರಿಂದ 26ರವರೆಗೆ ನಡೆದ ಈ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ನಿತ್ಯವೂ ಸಾವಿರಾರು ಜನರು ಭೇಟಿ ನೀಡಿದ್ದರು.
ಬಣ್ಣ ಬಣ್ಣದ ಹೂವುಗಳ ಮಧ್ಯದಲ್ಲಿ ತಲೆ ಎತ್ತಿರುವ ಬೃಹತ್ ಬೆಟ್ಟ, ಅದರ ಮೇಲೆ ತೇಜಸ್ವಿ ಅವರ ಪುತ್ಥಳಿ, ಧುಮ್ಮಿಕ್ಕುತ್ತಿರುವ ಕೃತಕ ಜಲಪಾತ, ಪುಷ್ಪಗಳಲ್ಲಿ ಅರಳಿರುವ ‘ನಿರುತ್ತರ’ದ ಮನೆ ನೋಡಗರನ್ನು ಸೆಳೆಯಿತು. ತೇಜಸ್ವಿ ಅವರು ಸಂಗೀತ, ಚಿತ್ರಕಲೆ, ಬೇಟೆ, ಕೃಷಿ, ಪಕ್ಷಿ ಛಾಯಾಗ್ರಹಣ, ಹೋರಾಟ, ಸಾಹಿತ್ಯ, ಯಂತ್ರ ಹಾಗೂ ಕಂಪ್ಯೂಟರ್ ಆಸಕ್ತಿಗಳನ್ನು ಬಿಂಬಿಸುವ ಆಕರ್ಷಕ ಹಾಗೂ ಅರ್ಥಪೂರ್ಣ ವ್ಯಂಗ್ಯಚಿತ್ರಗಳನ್ನಾಧರಿಸಿದ ಪ್ರತಿಮೆಗಳು ಹೂವಿನ ಲೋಕದಲ್ಲಿ ಅನಾವರಣ ಮಾಡಲಾಗಿತ್ತು. ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನರು ಬಂದಿದ್ದರು.
ಕುವೆಂಪು ಹಾಗೂ ತೇಜಸ್ವಿ ಅವರ ಕುಟುಂಬದ ಸದಸ್ಯರು ಸೋಮವಾರ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು.
‘ಅಂತಿಮ ದಿನವಾದ ಸೋಮವಾರ 1,94,165 ಜನರು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ₹ 65.01 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ. 13 ದಿನಗಳ ಈ ಫಲಪುಷ್ಪ ಪ್ರದರ್ಶನಕ್ಕೆ 8,10,973 ಜನರು ಭೇಟಿ ನೀಡಿದ್ದು, ಪ್ರವೇಶ ಶುಲ್ಕ, ಮಳಿಗೆ ಬಾಡಿಗೆ, ಪ್ರದರ್ಶನ ಪ್ರವೇಶ ಶುಲ್ಕ ಸೇರಿ ಒಟ್ಟು ₹2.74 ಕೋಟಿ ವರಮಾನ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.