ADVERTISEMENT

ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನ: ಚನ್ನಮ್ಮ,ರಾಯಣ್ಣ ಇತಿಹಾಸ ಅನಾವರಣ

ಲಾಲ್‌ಬಾಗ್‌ನಲ್ಲಿ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 18:49 IST
Last Updated 7 ಆಗಸ್ಟ್ 2025, 18:49 IST
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ರಂಜು ಪಿ.
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಶಾಲಾ ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು ಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಂಗಳೂರು: ‘ಸಸ್ಯಕಾಶಿ’ ಲಾಲ್‌ಬಾಗ್‌ನ ಗಾಜಿನ ಮನೆಯೊಳಗೆ ಬಣ್ಣ ಬಣ್ಣದ ಹೂವುಗಳಲ್ಲಿ ಅರಳಿದ ಕಿತ್ತೂರು ಕೋಟೆ, ಅದರ ಮೇಲೆ ಕಿತ್ತೂರು ಸಂಸ್ಥಾನದ ಲಾಂಛನ, ನೂರಾರು ಪುಷ್ಪಗಳ ಮಧ್ಯೆ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ನೋಡಗರ ಕಣ್ಮನ ಸೆಳೆಯುತ್ತಿವೆ. 

ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ವಿಷಯ ಆಧಾರಿತ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು. ಪ್ರದರ್ಶನವು ಆಗಸ್ಟ್‌ 7ರಿಂದ 18ರ ವರೆಗೆ ನಡೆಯಲಿದೆ.

ಗಾಜಿನ ಮನೆಯ ಪ್ರವೇಶ ದ್ವಾರದ ಭಾಗದಲ್ಲಿ ಎಕ್ಸಾಟಿಕ್ ಆರ್ಕಿಡ್ಸ್‌ ಜಾತಿಯ ಪೆಲನಾಪ್ಸಿಸ್‌, ಡೆಂಡ್ರೊಬಿಯಂ, ವಾಂಡಾ, ಮೊಕಾರಾ, ಕ್ಯಾಟ್ನಿಲಿಯಾ, ಆನ್ಸಿಡಿಯಂ ಹಾಗೂ ಕ್ಯಾಲಾಲಿಲ್ಲಿ, ವೈವಿಧ್ಯಮಯ ಜಿರೇನಿಯಂ ಜಾತಿಯ 1.75 ಲಕ್ಷಕ್ಕೂ ಹೆಚ್ಚಿನ ಹೂವು ಮತ್ತು ಎಲೆ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗಿದೆ. ಇದರ ಮುಂಭಾಗದಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಗಳು ರಾರಾಜಿಸುತ್ತಿವೆ. 

ADVERTISEMENT

ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಕಾರ್ಯಕ್ಷೇತ್ರವಾಗಿದ್ದ ಕಿತ್ತೂರು ಕೋಟೆ ಮಾದರಿಯು ಪುಷ್ಪಗಳಲ್ಲಿ ಅನಾವರಣಗೊಂಡಿದೆ. ಇದು 18 ಅಡಿ ಎತ್ತರ, 34 ಅಡಿ ಸುತ್ತಳತೆಯನ್ನು ಹೊಂದಿದೆ. ಒಂದು ಬಾರಿಗೆ ಹಸಿರು, ಬಿಳಿ, ಕಂದು ಹಾಗೂ ಗುಲಾಬಿ ವರ್ಣದ 1.5 ಲಕ್ಷ ಡಚ್‌ ಗುಲಾಬಿ ಹೂವು, 1.5 ಲಕ್ಷ ಹೈಬ್ರಿಡ್‌ ಸೇವಂತಿಗೆ ಹಾಗೂ 30 ಸಾವಿರ ಕೋಲ್ಕತ್ತ ಸೇವಂತಿಗೆ ಹೂವುಗಳನ್ನು ಬಳಸಿಕೊಂಡು ಈ ಪರಿಕಲ್ಪನೆ ಸಿದ್ಧಪಡಿಸಲಾಗಿದೆ. ಒಟ್ಟಾರೆ ಈ ಮಾದರಿಗೆ 6.6 ಲಕ್ಷ ಹೂವುಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಫಲಪುಷ್ಪ ಪ್ರದರ್ಶನದ ಆಕರ್ಷಣೆ ಆಗಿದೆ. ಕೋಟೆ ಮಾದರಿ ನಾಲ್ಕು ಮೂಲೆಗಳಲ್ಲಿ ಮಲ್ಲಸರ್ಜ, ರಾಜಗುರು, ಅಮಟೂರು ಬಾಳಪ್ಪ ಮತ್ತು ಸರದಾರ ಗುರುಸಿದ್ಧಪ್ಪ ಅವರ ಪ್ರತಿಮೆಗಳು ನೋಡುಗರನ್ನು ಸೆಳೆಯುತ್ತಿವೆ.   

ಗಾಜಿನ ಮನೆಯ ಬಲಬದಿಯಲ್ಲಿ 12 ಅಡಿ ಎತ್ತರದ ಕೋಟೆ ವಿನ್ಯಾಸದ ವರ್ಟಿಕಲ್‌ ಗಾರ್ಡನ್‌ ಮಾದರಿ ರೂಪಿಸಲಾಗಿದೆ. ಈ ಕೋಟೆಯ ಮೇಲೆ 10 ಅಡಿ ಎತ್ತರದಲ್ಲಿ ಭಾರತದ ರಾಷ್ಟ್ರ ಲಾಂಛನ ತಲೆ ಎತ್ತಿದೆ. ಇದಕ್ಕೆ ವಿವಿಧ ವರ್ಣದ ಆಕ್ಸಿಕಾರ್ಡಿಯಂ ಗೋಲ್ಡ್‌, ಗ್ರೀನ್, ಬ್ರಾಂಜ್, ಸಿಂಗೋನಿಯಂ ರೆಡ್‌, ಕ್ಲೋರೋಫೈಟಮ್‌, ಸೇವಂತಿಗೆ, ಫರ್ನ್ಸ್‌, ಗುಲಾಬಿ ಸೇರಿದಂತೆ ಒಟ್ಟು 1.75 ಲಕ್ಷಕ್ಕೂ ಹೆಚ್ಚು ಆಕರ್ಷಕ ಗಿಡಗಳನ್ನು ಬಳಸಿಕೊಂಡು ಸಿಂಗಾರ ಮಾಡಲಾಗಿದೆ. ಇದರ ಮೇಲೆ ಪುಷ್ಪಾಲಂಕೃತ ಅಶೋಕ ಸ್ತಂಭ ಗಮನ ಸೆಳೆಯುತ್ತಿದೆ.  

ಗಾಜಿನ ಮನೆಯ ಹಿಂಭಾಗದಲ್ಲಿ ರಾಣಿ ಅಬ್ಬಕ್ಕ ದೇವಿ, ಚೆನ್ನಾ ಭೈರಾದೇವಿ, ಬೆಳವಾಡಿ ಮಲ್ಲಮ್ಮ, ಕೆಳದಿ ಚನ್ನಮ್ಮ, ವೀರಮ್ಮಾಜಿ, ಒನಕೆ ಓಬವ್ವನವರ ಪ್ರತಿಮೆಗಳು ರಾರಾಜಿಸುತ್ತಿವೆ. ಈ ಹೋರಾಟಗಾರ್ತಿಯರ ಬಗ್ಗೆ ಚಿತ್ರ ಮಾಹಿತಿಯನ್ನು ಪ್ರದರ್ಶಿಸಲಾಗಿದೆ. 

ಮೊದಲ ದಿನ ವಯಸ್ಕರು, ಮಕ್ಕಳೂ ಸೇರಿ 14,317 ಮಂದಿ ಫಲಪುಷ್ಪ ಪ್ರದರ್ಶನ  ವೀಕ್ಷಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.   

ಪುಷ್ಪಗಳಲ್ಲಿ ಅರಳಿದ ಕಿತ್ತೂರು ರಾಣಿ ಚನ್ನಮ್ಮನ ಐಕ್ಯ ಸ್ಮಾರಕ ಪ್ರಜಾವಾಣಿ ಚಿತ್ರ:ರಂಜು ಪಿ.
ಆಸ್ಟ್ರೇಲಿಯಾದ ಜೆಮ್ಮಿ
ಆಸ್ಟ್ರೇಲಿಯಾದ ಕೇಟ್‌ –ಪ್ರಜಾವಾಣಿ ಚಿತ್ರ

ವಿಶೇಷ

* ರಾಯಣ್ಣ ಹುತಾತ್ಮರಾಗುವ ಸನ್ನಿವೇಶದ ಮರುಸೃಷ್ಟಿ

* ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 36 ಲಕ್ಷಕ್ಕೂ ಹೆಚ್ಚು ಹೂವುಗಳ ಬಳಕೆ 

* ಫಲಪುಷ್ಪ ಪ್ರದರ್ಶನಕ್ಕೆ 105 ವಿಧದ ಹೂವುಗಳ ಬಳಕೆ

* ಗಾಜಿನ ಮನೆಯ ಒಳಾಂಗಣಕ್ಕೆ ತಂಪು ನೀಡಲಿರುವ ಫಾಗರ್ಸ್‌

ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿರುವುದು ಗೊತ್ತಿದೆ. ಆದರೆ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ವೈವಿಧ್ಯಮಯ ಪುಷ್ಪಗಳನ್ನು ಒಂದೆಡೆ ನೋಡುತ್ತಿರುವುದು ಖುಷಿ ನೀಡಿದೆ
ಜೆಮ್ಮಿ ಆಸ್ಟ್ರೇಲಿಯಾ
ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ಸಲ ಭೇಟಿ ನೀಡುತ್ತಿದ್ದೇನೆ. ಫಲಪುಷ್ಪ ಪ್ರದರ್ಶನದಲ್ಲಿ ಭಾರತೀಯ ಹಾಗೂ ಬೆಂಗಳೂರಿನ ಸಂಸ್ಕೃತಿಯನ್ನು ನೋಡಬಹುದು. ಚನ್ನಮ್ಮ ರಾಯಣ್ಣರ ಬಗ್ಗೆ ಹೆಚ್ಚು ಗೊತ್ತಿಲ್ಲ. ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಎಂಬುದು ತಿಳಿದಿದೆ
ಕೇಟ್‌ ಆಸ್ಟ್ರೇಲಿಯಾ

ಪುಷ್ಪಗಳಲ್ಲಿ ಅರಳಿದ ಚನ್ನಮ್ಮನ ಐಕ್ಯ ಸ್ಮಾರಕ

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಅವರ ಐಕ್ಯ ಸ್ಮಾರಕದ ಮಾದರಿಯ ಕೇಂದ್ರ ಗೋಪುರವನ್ನು ಹೂವುಗಳಲ್ಲಿ ಮರು ಸೃಷ್ಟಿಸಲಾಗಿದೆ. ಈ ಗೋಪುರವು ಕಂಬಗಳಿಂದ ಕೂಡಿದ್ದು 8 ಅಡಿ ಅಗಲ ಹಾಗೂ 13 ಅಡಿ ಎತ್ತರದ ಆಕರ್ಷಕ ಪುಷ್ಪ ಕಮಾನುಗಳನ್ನು ಹೊಂದಿದೆ. ಈ ಪುಷ್ಪ ಮಾದರಿಗೆ ಒಂದು ಬಾರಿಗೆ 50 ಸಾವಿರ ಗುಲಾಬಿ ಹೂವುಗಳು 2.40 ಲಕ್ಷ ಸೇವಂತಿಗೆ 12 ಸಾವಿರಕ್ಕೂ ಹೆಚ್ಚು ಗ್ರೀನ್ ಪೋಲಿಯೇಜ್‌ಗಳನ್ನು ಬಳಸಿಕೊಳ್ಳಲಾಗಿದೆ.

ಇದು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದ್ದು ಇದರ ಮುಂಭಾಗದಲ್ಲಿ ಸಾರ್ವಜನಿಕರು ಫೋಟೊ ತೆಗೆಸಿಕೊಳ್ಳುತ್ತಿದ್ದರು.  

‘ಚನ್ನಮ್ಮನ ಜಯಂತಿ ಪ್ರಾರಂಭಿಸಿದ್ದು ನಾನೇ’

‘ನಾನು ಮೊದಲ ಸಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರದ ವತಿಯಿಂದಲೇ ಕಿತ್ತೂರು ರಾಣಿ ಚನ್ನಮ್ಮ ಅವರ ಜಯಂತಿ ಆಚರಿಸುವುದಕ್ಕೆ ಚಾಲನೆ ನೀಡಲಾಗಿತ್ತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ‘ಸಂಗೊಳ್ಳಿ ರಾಯಣ್ಣನವರಿಗೆ ಗಲ್ಲಿಗೇರಿಸಿದ್ದ ನಂದಗಡ ಹಾಗೂ ಅವರ ಜನ್ಮಸ್ಥಳ ಸಂಗೊಳ್ಳಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು. ಈ ಫಲಪುಷ್ಪ ಪ್ರದರ್ಶನದ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. 

ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ರಾಮಲಿಂಗಾರೆಡ್ಡಿ ಡಾ.ಎಂ.ಸಿ.ಸುಧಾಕರ್ ಶಾಸಕ ಉದಯ್ ಬಿ.ಗರುಡಾಚಾರ್ ಹರಿಹರ ಪಂಚಮಸಾಲಿ ವೀರಶೈವ ಲಿಂಗಾಯಿತ ಪೀಠದ ವಚನಾನಂದ ಸ್ವಾಮೀಜಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ನಿರ್ದೇಶಕ ರಮೇಶ್ ಡಿ.ಎಸ್. ಉಪಸ್ಥಿತರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.