
ಬೆಂಗಳೂರು: ನಗರದ ಆಹ್ಲಾದಕರ ವಾತಾವರಣಕ್ಕೆ ‘ಹಸಿರು ಕಳಸ’ವಾಗಿರುವ ಲಾಲ್‌ಬಾಗ್‌ನೊಳಗೇ ಸುರಂಗ ರಸ್ತೆ ಯೋಜನೆ ಬೃಹತ್ ‘ಶಾಫ್ಟ್’ ನಿರ್ಮಾಣವಾಗಲಿದೆ. ಇದರಿಂದ ನೂರಾರು ಮರ–ಗಿಡಗಳು ನೆಲಸಮವಾಗುವುದಲ್ಲದೆ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬೃಹತ್ ಬಂಡೆ ಹಾಗೂ ಜಲಮೂಲಗಳಿಗೂ ಧಕ್ಕೆಯಾಗಲಿದೆ.
ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಎರಡು ಪಥಗಳು (ತಲಾ 15.2 ಮೀಟರ್ ಸುತ್ತಳತೆ) ಲಾಲ್‌ಬಾಗ್ ಕೆಳಭಾಗದಲ್ಲಿ ಬರುವ ಜೊತೆಗೆ, ಹಲವು ರೀತಿಯ ಸೌಲಭ್ಯಗಳನ್ನು ಒದಗಿಸುವ ಬೃಹತ್ ‘ಶಾಫ್ಟ್’ ಕೂಡ ಲಾಲ್‌ಬಾಗ್‌ನೊಳಗೇ ನಿರ್ಮಾಣವಾಗಲಿದೆ.
ಸಿದ್ದಾಪುರ ರಸ್ತೆಯ ಅಶೋಕ ಪಿಲ್ಲರ್ ಬಳಿಯಿಂದ ಸುರಂಗ ರಸ್ತೆಯ ಸುಮಾರು 1.41 ಕಿ.ಮೀ ಉದ್ದದ ಪ್ರವೇಶ ರ‍್ಯಾಂಪ್–7 ಹಾಗೂ ವಿಲ್ಸನ್ ಗಾರ್ಡನ್ ಬಳಿಯ ಸಿದ್ದಾಪುರ ರಸ್ತೆಯಲ್ಲಿ ಸುಮಾರು 1.08 ಕಿ.ಮೀ ಉದ್ದ ನಿರ್ಗಮನ ರ‍್ಯಾಂಪ್–2 ಲಾಲ್‌ಬಾಗ್‌ನಡಿಯೇ ಸಾಗಿ, ಉದ್ಯಾನದೊಳಗೇ ತೆರೆದುಕೊಳ್ಳಲಿವೆ. ಸುಮಾರು ಎರಡು ಎಕರೆಗಿಂತ ಹೆಚ್ಚು ಪ್ರದೇಶದಲ್ಲಿ ಈ ‘ಶಾಫ್ಟ್’ ನಿರ್ಮಾಣವಾಗಲಿದೆ.
‘ಲಾಲ್‌ಬಾಗ್‌ನ ಆರು ಎಕರೆ ಪ್ರದೇಶವನ್ನು ಸುರಂಗ ರಸ್ತೆ ಯೋಜನೆಯ ಕಾಮಗಾರಿಗೆ ಮಾತ್ರ ಬಳಸಿಕೊಂಡು, ನಂತರ ಅದನ್ನು ಉದ್ಯಾನವನ್ನಾಗಿಯೇ ನಿರ್ಮಿಸಲಾಗುವುದು’ ಎಂದು ಬಿ–ಸ್ಮೈಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಲಾಲ್‌ಬಾಗ್ ಉದ್ಯಾನದಲ್ಲೇ ಎಕರೆಗಟ್ಟಲೆ ಪ್ರದೇಶದಲ್ಲಿ ನಿರ್ಮಾಣವಾಗುವ ‘ಶಾಫ್ಟ್’ ಬಗ್ಗೆ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಸಿದ್ದಾಪುರ ರಸ್ತೆಯ ಲಾಲ್‌ಬಾಗ್ ಗೇಟ್ ಸಮೀಪವಿರುವ ಜಾಗದಲ್ಲಿ ‘ಶಾಫ್ಟ್’ ನಿರ್ಮಾಣವಾಗಲಿದೆ. ಅದರಿಂದ ನೂರಾರು ಗಿಡ–ಮರಗಳನ್ನು ಕಡಿಯಬೇಕಾಗುತ್ತದೆ. ಈಗಾಗಲೇ ಮಾರ್ಕಿಂಗ್‌ಗಾಗಿ ಹಲವು ಗಿಡ–ಮರಗಳನ್ನು ಬಿ–ಸ್ಮೈಲ್ ವತಿಯಿಂದ ಕಡಿಯಲಾಗಿದೆ. ಇದಕ್ಕೆ ಯಾರ ಅನುಮತಿಯನ್ನೂ ಪಡೆದಿಲ್ಲ. ಸುರಂಗ ರಸ್ತೆ ಯೋಜನೆಗಾಗಿ ಬಳಸಿಕೊಳ್ಳುವ ಆರು ಎಕರೆ ಪ್ರದೇಶದಲ್ಲಿ ಮರ–ಗಿಡಗಳನ್ನು ಕಡಿದು, ಪೈಪ್‌ಗಳನ್ನು ನೆಟ್ಟು, ಟೇಪ್‌ಗಳನ್ನು ಕಟ್ಟಲಾಗಿದೆ.
ಕೆಂಪೇಗೌಡರು ನಿರ್ಮಿಸಿರುವ ಗೋಪುರವನ್ನು ಹೊಂದಿರುವ ಲಾಲ್‌ಬಾಗ್‌ನ ಬೃಹತ್ ಬಂಡೆ ಹಾಗೂ ಇಲ್ಲಿರುವ ಕೆರೆ–ಕುಂಟೆಗಳಿಗೆ ಅಂಟಿಕೊಂಡೇ ‘ಶಾಫ್ಟ್’ ನಿರ್ಮಾಣದ ಯೋಜನೆ ಡಿಪಿಆರ್‌ನಲ್ಲಿ ದಾಖಲಾಗಿದೆ. ಹೀಗಾಗಿ, ಲಾಲ್‌ಬಾಗ್‌ನ ವಾತಾವರಣಕ್ಕೆ ಎಲ್ಲ ರೀತಿಯಲ್ಲೂ ದುಷ್ಪರಿಣಾಮ ಬೀರುವ ಸುರಂಗ ರಸ್ತೆಯ ಯಾವುದೇ ಸೌಲಭ್ಯ ಅಥವಾ ಕಾಮಗಾರಿ ಬೇಡವೇ ಬೇಡ ಎಂಬುದು ಪರಿಸರ ಕಾರ್ಯಕರ್ತರ ಆಗ್ರಹವಾಗಿದೆ.
ಇನ್ನು, ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಸುರಂಗ ರಸ್ತೆಯ ಅಲೈನ್‌ಮೆಂಟ್ ಹಾಗೂ ಲಾಲ್‌ಬಾಗ್‌ನಲ್ಲಿ ಜೀವವೈವಿಧ್ಯಕ್ಕೆ ಧಕ್ಕೆಯಾಗುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಶಾಫ್ಟ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದೂ ಸಮಿತಿ ಸಲಹೆ ನೀಡಿದೆ. ಆದರೆ ಈ ಬಗ್ಗೆ ಯಾವುದೇ ವಿವರಣೆಯನ್ನು ಬಿ–ಸ್ಮೈಲ್ ಅಧಿಕಾರಿಗಳು ನೀಡಿಲ್ಲ.
ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಲಾಲ್‌ಬಾಗ್ ಒಳಗೇ ಸುರಂಗ ರಸ್ತೆಯ ಶಾಫ್ಟ್ ಬರಲಿದೆ ಎಂದು ಡಿಪಿಆರ್‌ನಲ್ಲಿ ಹೇಳಲಾಗಿದೆ. ಪರಿಸರಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಈ ಸ್ಥಳದಿಂದ ಶಾಫ್ಟ್ ಅನ್ನು ಸ್ಥಳಾಂತರಿಸಬೇಕು. –ತಜ್ಞರ ಸಮಿತಿಯ ಅಭಿಪ್ರಾಯ
ಸುರಂಗ ರಸ್ತೆಯ ಪ್ರವೇಶ ಮತ್ತು ನಿರ್ಗಮನ ಪ್ರದೇಶದಲ್ಲಿ ಬಸ್ ನಿಲ್ದಾಣ, ಆಟೊ–ಟ್ಯಾಕ್ಸಿ ನಿಲ್ದಾಣ, ಮಾರುಕಟ್ಟೆಯಂತಹ ಸೌಲಭ್ಯಗಳನ್ನು ಕಲ್ಪಿಸಲು ‘ಶಾಫ್ಟ್’ ನಿರ್ಮಿಸಲಾಗುತ್ತಿದೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ಯೋಜನೆಯಲ್ಲಿ ಐದು ಶಾಫ್ಟ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಹೆಬ್ಬಾಳ, ಅರಮನೆ ಮೈದಾನ, ರೇಸ್‌ಕೋರ್ಸ್, ಲಾಲ್‌ಬಾಗ್, ಸಿಲ್ಕ್ ಬೋರ್ಡ್‌ನಲ್ಲಿ ಶಾಫ್ಟ್‌ಗಳು ನಿರ್ಮಾಣವಾಗಲಿವೆ.
‘ಶಾಫ್ಟ್’ ಪ್ರದೇಶ ಮೊದಲು ಸುರಂಗ ರಸ್ತೆ ನಿರ್ಮಾಣ ಕಾರ್ಯಗಳಿಗೆ ಬಳಕೆಯಾಗಲಿದೆ. ನಂತರ ಇದು ‘ಇಂಟರ್ ಮಾಡೆಲ್ ಇಂಟರ್‌ಚೇಂಚ್ ಹಬ್’ ಆಗಲಿದೆ. ಸುರಂಗ ರಸ್ತೆ ನಿಲ್ದಾಣದ ಸುರಕ್ಷತೆಗೆ ಒತ್ತು ನೀಡಿ, ಪ್ರಯಾಣಿಕರು ಎಲ್ಲ ರೀತಿಯ ಸೌಲಭ್ಯ ಪಡೆಯಲು ‘ಶಾಫ್ಟ್’ ವಿನ್ಯಾಸಗೊಳಿಸಲಾಗಿದೆ.
ಆಟೊ–ಟ್ಯಾಕ್ಸಿ ನಿಲ್ದಾಣ
ಸರ್ವಿಸ್ ರಸ್ತೆ
ಮುಖ್ಯರಸ್ತೆ
ಶಾಫ್ಟ್–4 ಪೋಡಿಯಂ ಲೆವೆಲ್
ಮಾರುಕಟ್ಟೆ
ಬಸ್ ನಿಲ್ದಾಣ
ಅಶೋಕ ಪಿಲ್ಲರ್ ಕಡೆಗೆ
ಸಿದ್ದಾಪುರ ರಸ್ತೆ
ವಿಲ್ಸನ್‌ಗಾರ್ಡನ್ ಕಡೆಗೆ
ತುರ್ತು ಕಾರು ನಿಲುಗಡೆ
ಶಾಫ್ಟ್–4 ಪೋಡಿಯಂ
ಮಾರುಕಟ್ಟೆ
ಆಟೊ–ಟ್ಯಾಕ್ಸಿ ನಿಲ್ದಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.