ಬೆಂಗಳೂರು: ‘ದೇವನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 1,777 ಎಕರೆ ಭೂ ಸ್ವಾಧೀನ ವಿರುದ್ಧದ ಹೋರಾಟದ ಗೆಲುವು, ಕರ್ನಾಟಕ ಮತ್ತು ದೇಶದಾದ್ಯಂತ ಇರುವ ರೈತರಿಗೆ ದೊರೆತ ಬಹುದೊಡ್ಡ ಜಯ’ ಎಂದು ಭಾರತೀಯ ರೈತ ಚಳವಳಿಗಳ ಸಮನ್ವಯ ಸಮಿತಿ (ಐಸಿಸಿಎಫ್‌ಎಂ) ಬಣ್ಣಿಸಿದೆ.
‘ಈ ಹೋರಾಟದ ಗೆಲುವು ಭೂ ಸ್ವಾಧೀನ ಕೈಬಿಡುವಂತೆ ದೇವನಹಳ್ಳಿ ತಾಲ್ಲೂಕಿನ 13 ಹಳ್ಳಿಗಳ ರೈತರು ಸಂಯುಕ್ತ ಹೋರಾಟ– ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಹತ್ತಾರು ಸಂಘಟನೆಗಳ ಬೆಂಬಲದೊಂದಿಗೆ ನಡೆಸಿದ ಏಕತೆ ಮತ್ತು ಶಾಂತಿಯುತ ಪ್ರತಿಭಟನೆಯ ಫಲವಾಗಿದೆ’ ಎಂದು ಸಮಿತಿ ತಿಳಿಸಿದೆ.
ಹೋರಾಟಗಾರರ ಈ ವಿಜಯೋತ್ಸವವನ್ನು ದೇಶದಾದ್ಯಂತ ಆಚರಿಸುವ ಮೂಲಕ ಕೃಷಿ ಭೂಮಿ, ರೈತರ ಜೀವನೋಪಾಯ ಮತ್ತು ಆಹಾರ ಸಾರ್ವಭೌಮತ್ವವನ್ನು ರಕ್ಷಿಸುವ ಹೋರಾಟಗಳನ್ನು ಬಲಪಡಿಸುವಂತೆ ರೈತ ಸಂಘಟನೆಗಳು ಮತ್ತು ಜನಚಳವಳಿಗಳಿಗೆ ಐಸಿಸಿಎಫ್‌ಎಂ ಕರೆ ನೀಡಿದೆ.
‘ಕಾರ್ಪೊರೇಟ್ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗಾಗಿ ಫಲವತ್ತಾದ ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ರೈತರು ಎತ್ತಿದ ಧ್ವನಿಯನ್ನು ಆಲಿಸುವ ಹಾಗೂ ರೈತರ ಸಾಂವಿಧಾನಿಕ, ಕಾನೂನು ಬದ್ಧ ಹಕ್ಕುಗಳನ್ನು ಎತ್ತಿ ಹಿಡಿದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಐಸಿಸಿಎಫ್‌ಎಂ ಶ್ಲಾಘಿಸುತ್ತದೆ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಯುಧ್‌ವೀರ್‌ಸಿಂಗ್ ಮತ್ತು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ವಕ್ತಾರ ರಾಕೇಶ್‌ಸಿಂಗ್ ಟಿಕಾಯತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಿರ್ಧಾರವು ದೇಶದಾದ್ಯಂತ ನಡೆಯುತ್ತಿರುವ ಭೂಮಿ ಸಂಬಂಧಿತ ಹೋರಾಟಗಳಿಗೆ ಸ್ಫೂರ್ತಿಯಾಗುತ್ತದೆ. ಇಂಥ ಹೋರಾಟಗಳಲ್ಲಿ ಭೂಸ್ವಾಧೀನ, ಪರಿಹಾರ, ಪಾರದರ್ಶಕ ಮತ್ತು ಪುನರ್ವಸತಿ ಕಾಯ್ದೆ (ಎಲ್‌ಎಆರ್‌ಆರ್) 2013 ಅನ್ನು ಉಲ್ಲಂಘಿಸಿ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.