ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ನಾಲ್ಕು ಗ್ರಾಮಗಳಲ್ಲಿ ಭೂಸ್ವಾಧೀನಗೊಳ್ಳಲಿರುವ ಜಮೀನಿಗೆ ದರ ನಿಗದಿಪಡಿಸಲಾಗಿದ್ದು, ಕೆಐಎಡಿಬಿಯಿಂದ ಒಂದು ಎಕರೆಗೆ ₹ 1ಕೋಟಿ 60 ಲಕ್ಷ ನೀಡಲಾಗುತ್ತದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಹೊಸಪಾಳ್ಯದಲ್ಲಿ ಸೋಂಪುರ ಕೈಗಾರಿಕಾ ಪ್ರದೇಶದ ಏಳನೇ ಹಂತದ ಕಂಬಾಳು, ಕಾಸರಘಟ್ಟ, ಘಂಟೆ ಹೊಸಹಳ್ಳಿ, ಮಾಚನಹಳ್ಳಿ ಗ್ರಾಮಗಳ ಸುಮಾರು 444.31 ಎಕರೆ ಭೂ ಸ್ವಾಧೀನದ ಜಮೀನುಗಳ ದರ ನಿಗದಿ ಮಾಡುವ ಸಂಬಂಧ ರೈತರ ಜತೆ ಕೆಐಎಡಿಬಿ ಅಧಿಕಾರಿಗಳು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ರಘುನಂದನ್ ಮಾತನಾಡಿ, ‘ಇಲ್ಲಿನ ನಾಲ್ಕು ಗ್ರಾಮಗಳ ಜಮೀನ ದರ ಎಕರೆಗೆ ₹ 1 ಕೋಟಿ 60 ಲಕ್ಷ ನಿಗದಿಯಾಗಿದೆ‘ ಎಂದು ಪ್ರಕಟಿಸಿದರು.
'ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕೆಲವು ಅಧಿಕಾರಿಗಳೇ ತಕರಾರು ಅರ್ಜಿ ಹಾಕುವಂತೆ ಮಾಡಿ, ಅದನ್ನು ಬಗೆಹರಿಸುವ ನೆಪದಲ್ಲಿ ರೈತರಿಂದ ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವವರು ಹಣ ಪಡೆಯಲು ಲಂಚ ಕೊಡುವಂತಾಗಿದೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
'ಕಾಸರಘಟ್ಟ, ಕಂಬಾಳು, ಘಂಟೆಹೊಸಹಳ್ಳಿ ಗ್ರಾಮಗಳು ಜಲಾನಯನ ಪ್ರದೇಶಕ್ಕೆ ಒಳಪಟ್ಟಿವೆ. ಆದರೂ ಅಲ್ಲಿನ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಬೇಕು' ಎಂದು ಕೆಲವರು ಆಗ್ರಹಿಸಿದರು.
ಭಾರತೀಯ ಕಿಸಾನ್ ಸಂಘದ ಕಾಸರಘಟ್ಟ ಗಂಗಾಧರ್ ಮಾತನಾಡಿ, 'ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ಭಾಗದ ಭೂಮಿ ಸ್ವಾಧೀನಪಡಿಸಿಕೊಂಡರೆ ಏನು ಮಾಡಬೇಕು. ಸರ್ಕಾರ ನೀಡುವ ಪರಿಹಾರದಿಂದ ಬೇರೆ ಕಡೆ ಜಮೀನು ಕೊಳ್ಳಲು ಆಗುವುದಿಲ್ಲ. ಮುಂದೆ ಭೂ ಪರಿಹಾರ ತೆಗೆದುಕೊಳ್ಳಬೇಕಾದರೆ ಮಧ್ಯವರ್ತಿಗಳನ್ನು ಅವಲಂಬಿಸುವ ಸನ್ನಿವೇಶ ಸೃಷ್ಟಿಮಾಡಲಾಗುತ್ತಿದೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.