ADVERTISEMENT

232 ಎಕರೆ ಅರಣ್ಯ ಭೂಮಿ ಖಾಸಗಿ ಪಾಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2022, 8:23 IST
Last Updated 17 ಫೆಬ್ರುವರಿ 2022, 8:23 IST

ಬೆಂಗಳೂರು: ಉತ್ತರಹಳ್ಳಿ ಹೋಬಳಿಯ ಗುಳಿಕಮಲೆಯಲ್ಲಿ 232 ಎಕರೆ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಖಾಸಗಿಯವರಿಗೆ ಹಂಚಿಕೆ ಮಾಡಲಾಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಈ ಜಾಗ ನಿರಂತರವಾಗಿ ವಿಸ್ತರಿಸುತ್ತಿರುವ ನಗರ ಮತ್ತು ವನ್ಯಜೀವಿಗಳ ಆವಾಸಸ್ಥಾನವನ್ನು ಬೇರ್ಪಡಿಸಲು ಬಫರ್ ವಲಯವಾಗಿ ಕಾರ್ಯನಿರ್ವಹಿಸುತ್ತಿದೆ. ‌

ದಾಖಲೆಗಳ ಪ್ರಕಾರ, 2013-14ನೇ ಸಾಲಿನಲ್ಲಿ ಅರಣ್ಯ ಇಲಾಖೆಯು ಈ ಜಮೀನಿನ ಮಾಲೀಕತ್ವ ಹೊಂದಿತ್ತು. 1934ರಲ್ಲಿ ಸರ್ಕಾರದಿಂದ ಮಂಜೂರಾದ ಸಿ ಆ್ಯಂಡ್ ಡಿ ಭೂಮಿಯಲ್ಲಿ ಈ ಜಮೀನು ಸೇರಿದ್ದು, ಅರಣ್ಯ ಇಲಾಖೆಗೆ ಸರ್ವೆ ನಂಬರ್ 35ರಲ್ಲಿ 319 ಎಕರೆ 14 ಗುಂಟೆ ಹಾಗೂ ಸರ್ವೆ ನಂಬರ್ 36ರಲ್ಲಿ 184 ಎಕರೆ ಜಾಗ ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಅರಣ್ಯ ಇಲಾಖೆಗೆ ಪಟ್ಟಾ ಕೂಡ ನೀಡಲಾಗಿತ್ತು.

ADVERTISEMENT

ಆದರೆ, 2014ರ ಸೆಪ್ಟೆಂಬರ್‌ನಲ್ಲಿ ಅಂದಿನ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ಅವರು ಈ ಜಮೀನು ಕಂದಾಯ ಇಲಾಖೆಗೆ ಸೇರಿದ ‘ಮುಫತ್ ಗೋಮಾಳ’ ಎಂದು ಘೋಷಿಸಿ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ ಅರಣ್ಯ ಇಲಾಖೆಯ ಹೆಸರಿನಲ್ಲಿದ್ದ ಖಾತೆ ರದ್ದಾಯಿತು.

ನಂತರ ದಿನಗಳಲ್ಲಿ ಜಮೀನಿನ ಹಕ್ಕುಪತ್ರಕ್ಕಾಗಿ ಹಲವರು ಅರ್ಜಿ ಸಲ್ಲಿಸಿದ್ದು, ಬಳಿಕ ಈ ವಿಷಯ ಅರಣ್ಯ ಇಲಾಖೆಗೆ ತಿಳಿಯಿತು. 2018ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೈ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡುವ ಪ್ರಯತ್ನಗಳನ್ನು ನಿರ್ಬಂಧಿಸಿದ್ದರು.‌

‘ಅರಣ್ಯ ಇಲಾಖೆಯ ಕಾಳಜಿಯನ್ನು ಉಪವಿಭಾಗಾಧಿಕಾರಿ ಕೇಳಿಸಿಕೊಳ್ಳಲೇ ಇಲ್ಲ. ಅರಣ್ಯ ಇಲಾಖೆಗೆ ಭೂಮಿ ಮಂಜೂರು ಮಾಡಿರುವ ಬಗ್ಗೆ ಯಾವುದೇ ಅಧಿಸೂಚನೆ ಇಲ್ಲ ಎಂದು ಅವರು ತಮ್ಮದೇ ಆದ ತೀರ್ಮಾನಕ್ಕೆ ಬಂದರು’ ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

1994ರ ಜುಲೈ 20ರಂದು ಸರ್ಕಾರ ಹೊರಡಿಸಿದ್ದ ಮತ್ತೊಂದು ಅದೇಶವನ್ನು ಉಲ್ಲೇಖಿಸಿದ್ದ ದೀಪಕಾ ಅವರು, ‘ಈ ಜಮೀನು ಆನೇಕಲ್ ತಾಲ್ಲೂಕಿನ ಭೂತನಹಳ್ಳಿ ಕಿರು ಅರಣ್ಯ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿದೆ. ಬನ್ನೇರುಘಟ್ಟದಿಂದ ಸಾವನದುರ್ಗ ಅರಣ್ಯಕ್ಕೆ ವಲಸೆ ಹೋಗುವಾಗ ಮತ್ತು ಬರುವಾಗ ಆನೆಗಳ ನಿಲುಗಡೆಗೆ ಇದು ಪ್ರಮುಖ ಕಾರಿಡಾರ್ ಆಗಿದೆ’ ಎಂದೂ ತಿಳಿಸಿದ್ದರು.

‘ಈ ಬಗ್ಗೆ ನಾವು ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ’ ಎಂದು ಬೆಂಗಳೂರು ನಗರ ಡಿಸಿಎಫ್‌ ಎಸ್‌.ಎಸ್. ರವಿಶಂಕರ್ ಪ್ರತಿಕ್ರಿಯಿಸಿದರು. ‘ಅರಣ್ಯ ಭೂಮಿ ಒತ್ತುವರಿ ಗಂಭೀರ ವಿಷಯ. ಈ ವಿಷಯ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು.

‘ಬೆಂಗಳೂರಿನ ಸುತ್ತಮುತ್ತಲಿನ ಅರಣ್ಯಗಳಿಗೆ ಭೂ ಮಾಫಿಯಾ ದೊಡ್ಡ ಹೊಡೆತ ನೀಡಿದೆ. ಅಕ್ರಮವಾಗಿ ಜಮೀನು ಮಂಜೂರು ಮಾಡಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವನ್ಯಜೀವಿ ಕಾರಿಡಾರ್‌ಗಳನ್ನು ಫ್ಲ್ಯಾಟ್‌ಗಳಾಗಿ ಪರಿವರ್ತಿಸಲಾಗುತ್ತಿದೆ. ವನ್ಯಜೀವಿ ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಟ್ಟಾಗ ಅರಣ್ಯ ಇಲಾಖೆ ಮೇಲೆ ಒತ್ತಡ ತರಲಾಗುತ್ತದೆ’ ಎಂದು ಅರಣ್ಯ ಇಲಾಖೆಯ ಮತ್ತೊಬ್ಬ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.