
ಬೆಂಗಳೂರು: ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ಭೂಮಿ– ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಇದೇ 26 ರಂದು ‘ಬೆಂಗಳೂರೂ ಚಲೊ’ ಭೂಮಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಕಾರ್ಯದರ್ಶಿ ಕುಮಾರ ಸಮತಳ, ‘ಹಾಲಿ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು, ಬಗರ್ ಹುಕುಂ ಸಾಗುವಳಿದಾರರಿಗೆ ‘ಒಂದು ಬಾರಿಯ ವಿಲೇವಾರಿ’ ಅಡಿಯಲ್ಲಿ ಭೂಮಿ ಮಂಜೂರಾತಿ ನೀಡಬೇಕು. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಭೂಮಿ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದು ಹೇಳಿದರು.
‘ವಸತಿರಹಿತರಿಗೆ ಸೂರು ಕಲ್ಪಿಸಲು ರಾಜ್ಯವ್ಯಾಪಿ ಸಮಗ್ರ ಬೃಹತ್ ವಸತಿ ಯೋಜನೆ ಘೋಷಿಸಬೇಕು. ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ಸಿಗಬೇಕು. ಬಲವಂತದ ಮತ್ತು ಫಲವತ್ತಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ರದ್ದಾಗಬೇಕು. ಬಲಾಢ್ಯರ ಪರವಾದ 2022ರ ಭೂ ತಿದ್ದುಪಡಿ ಕಾಯ್ದೆ ರದ್ದಾಗಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದಲ್ಲಿ ಸರ್ಕಾರಿ, ಗೋಮಾಳ, ಖರಾಬ್, ಅನಾದೀನ, ಸೊಪ್ಪಿನ ಬೆಟ್ಟ ಇತ್ಯಾದಿ ಹೆಸರಿನಲ್ಲಿ ಸರ್ಕಾರಿ ಭೂಮಿಯಿದೆ. ಇದನ್ನು ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ಮಾಡಲು ಅವಕಾಶವಿಲ್ಲ. ಹೀಗಾಗಿ, ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು, ಭೂಮಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್, ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ, ಕೆ.ಮರಿಯಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.