ADVERTISEMENT

ಏ. 5ರಿಂದ ಲಾರಿ ಮುಷ್ಕರ: ಬಿ.ಚನ್ನಾರೆಡ್ಡಿ 

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 21:08 IST
Last Updated 4 ಮಾರ್ಚ್ 2021, 21:08 IST

ಬೆಂಗಳೂರು: ‘ಹಳೆ ವಾಹನ ವಿಲೇವಾರಿ ನೀತಿ, ಮೋಟಾರು ಕಾಯ್ದೆ ಉಲ್ಲಂಘನೆಯ ದಂಡ ಹೆಚ್ಚಳ, ಟೋಲ್‌ ಶುಲ್ಕ ಹಾಗೂ ಡೀಸೆಲ್‌ ದರ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಾರಿಗೆ ವಿರೋಧಿ
ನೀತಿಗಳನ್ನು ಖಂಡಿಸಿ ಏಪ್ರಿಲ್‌ 5ರಿಂದ ದೇಶವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಫೆಡರೇಷನ್‌ನ ಅಧ್ಯಕ್ಷ ಬಿ.ಚನ್ನಾರೆಡ್ಡಿತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಕ್ಷಿಣ ರಾಜ್ಯಗಳ ಲಾರಿ ಮಾಲೀಕರ ಸಂಘಟನೆಗಳೊಂದಿಗೆ ಸಮಾಲೋಚಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ ಹಾಗೂ ಆರ್ಥಿಕ ಹಿಂಜರಿತದಿಂದ ಸರಕು ಸಾಗಣೆ ವಲಯ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರವು ತೈಲ ಬೆಲೆ ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ.ಹಿಂದಿನ ಆರು ತಿಂಗಳಲ್ಲಿ ಡೀಸೆಲ್‌ ಬೆಲೆ ₹20.42 ರಷ್ಟು ಹೆಚ್ಚಳ ಕಂಡಿದೆ. ಜನ ವಿರೋಧಿ ಸಾರಿಗೆ ನೀತಿಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಷ್ಕರದ ಹಾದಿ ಹಿಡಿದಿದ್ದೇವೆ. ಆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಲಿದ್ದೇವೆ’ ಎಂದರು.

‘ಕೇಂದ್ರವು ವಾಹನ ತಯಾರಿಕ ಕಂಪನಿಗಳ ಲಾಬಿಗೆ ಮಣಿಯುತ್ತಿದೆ. ಹಳೆಯ ವಾಹನಗಳನ್ನು ಗುಜರಿಗೆ ನೀಡುವ ನೀತಿ ಅನುಷ್ಠಾನಗೊಳಿಸಿರುವುದು ಇದಕ್ಕೊಂದು ನಿದರ್ಶನ. ಈ ನೀತಿಯಿಂದ ಲಕ್ಷಾಂತರ ಮಂದಿ ಬೀದಿಗೆ ಬೀಳುತ್ತಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದುತಿಳಿಸಿದರು.

ADVERTISEMENT

‘ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದವರಿಗೆ ಈ ಹಿಂದೆ ₹100ರಿಂದ ₹200 ದಂಡ ವಿಧಿಸಲಾಗುತ್ತಿತ್ತು. ಈಗ ಇದನ್ನು ₹500ರಿಂದ ₹20 ಸಾವಿರದವರೆಗೆ ಏರಿಕೆ ಮಾಡಲಾಗಿದೆ. ಇದನ್ನೇ ನೆಪವಾಗಿಟ್ಟುಕೊಂಡು ಸಾರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಾಲಕರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿದ್ದಾರೆ. ವಾಹನಗಳ ಮೂರನೇ ವ್ಯಕ್ತಿಯ (ಥರ್ಡ್‌ ಪಾರ್ಟಿ) ವಿಮೆ ಮೊತ್ತವನ್ನು ಪ್ರತಿವರ್ಷ ಏರಿಕೆ ಮಾಡುತ್ತಿರುವುದಕ್ಕೆ ನಮ್ಮ ಆಕ್ಷೇಪವಿದೆ. ಹಳೆಯ ವಾಹನಗಳಿಗೆ ವಿಧಿಸುತ್ತಿರುವ ಹಸಿರು ತೆರಿಗೆ ಕೈಬಿಡಬೇಕು ಎಂಬುದೂ ನಮ್ಮ ಒತ್ತಾಯ. ನಮ್ಮ ಒಟ್ಟಾರೆ ಬೇಡಿಕೆ ಪತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸಲ್ಲಿಸಲಿದ್ದೇವೆ’ ಎಂದರು.

ಸಂಘದ ಉಪಾಧ್ಯಕ್ಷರಾದ ಎನ್‌.ಶ್ರೀನಿವಾಸ ರಾವ್‌, ಯು.ಶ್ರೀನಿವಾಸ್‌ ಹಾಗೂ ಪ್ರಧಾನ ಕಾರ್ಯದರ್ಶಿ ಆರ್‌.ವಿ.ಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.