ಬೆಂಗಳೂರು: ‘ಜಾಣ ಜಾಣೆಯರ ನಗೆ ಜಾಗರಣೆ’ಯನ್ನು ಚಿಕ್ಕಲಾಲ್‌ಬಾಗ್ ಬಳಿಯ ತುಳಸಿ ತೋಟದ ಆಟದ ಮೈದಾನದಲ್ಲಿ ಫೆಬ್ರುವರಿ 26ರಂದು ಆಯೋಜಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
‘ಪ್ರತಿ ವರ್ಷದಂತೆ ಈ ವರ್ಷವೂ ಶಿವರಾತ್ರಿಯ ಜಾಗರಣೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ.26ರ ಸಂಜೆ ಶಿವ–ಪಾರ್ವತಿಯರ ಅಂಬಾರಿ ಉತ್ಸವ 30 ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಸಾಲಿಗ್ರಾಮದ ಆನಂದ ಗುರೂಜಿ, ಶಾಸಕರು ಮತ್ತು ಅಘೋರಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
ರುದ್ರ ಲಕ್ಷಾರ್ಚನೆ, ಮಹಾರುದ್ರ ಹೋಮ ಆಯೋಜಿಸಲಾಗಿದ್ದು, ತೀರ್ಥ ಮತ್ತು ಪ್ರಸಾದ ವಿತರಿಸಲಾಗುತ್ತದೆ. ಎಂ.ಎಸ್. ನರಸಿಂಹಮೂರ್ತಿ, ಪ್ರೊ. ಕೃಷ್ಣೇಗೌಡ, ಮಿಮಿಕ್ರಿ ದಯಾನಂದ್, ಮಿಮಿಕ್ರಿ ಗೋಪಿ, ವೈಜನಾಥ ಸಜ್ಜನಶೆಟ್ಟಿ, ಆಶಾ ನಾಯಕ್, ಕೋಣನಕುಂಟೆ ಜಿ. ವೆಂಕಟೇಶ್, ಮಹೇಶ್, ಪ್ರತಾಪ್, ಉಮೇಶ್ ಗೌಡ ಸೇರಿದಂತೆ ಹಾಸ್ಯ ಭಾಷಣಕಾರರು ರಂಜನೆ ನೀಡಲಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.