ADVERTISEMENT

ನ್ಯಾಯಾಲಯದ ಆವರಣದಲ್ಲಿ ಗಲಾಟೆ: ವಕೀಲ ಜಗದೀಶ್ ಬಂಧನ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 7:29 IST
Last Updated 13 ಫೆಬ್ರುವರಿ 2022, 7:29 IST
ವಕೀಲ ಜಗದೀಶ್ ಕೆ.ಎನ್. ಮಹದೇವ್ (ಚಿತ್ರ-ಫೇಸ್‌ಬುಕ್)
ವಕೀಲ ಜಗದೀಶ್ ಕೆ.ಎನ್. ಮಹದೇವ್ (ಚಿತ್ರ-ಫೇಸ್‌ಬುಕ್)   

ಬೆಂಗಳೂರು: ನಗರದ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಸಂಬಂಧ ವಕೀಲ ಜಗದೀಶ್ ಕೆ.ಎನ್. ಮಹದೇವ್ ಅವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

'ಬೆಂಗಳೂರು ವಕೀಲರ‌ ಸಂಘ ನೀಡಿದ್ದ ದೂರಿನಡಿ ಪ್ರಕರಣ ‌ದಾಖಲಿಸಿಕೊಳ್ಳಲಾಗಿದೆ.ಭಾನುವಾರ ನಸುಕಿನಲ್ಲಿ ಕೊಡಿಗೇಹಳ್ಳಿಯಲ್ಲಿರುವ ಮನೆಯಲ್ಲಿ ಜಗದೀಶ್ ಅವರನ್ನು ಬಂಧಿಸಲಾಗಿದೆ. ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದೇವೆ' ಎಂದು ಪೊಲೀಸ್ ಮೂಲಗಳು ಹೇಳಿವೆ.

'ವಕೀಲರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಜಗದೀಶ್, ವೃತ್ತಿಗೆ ಚ್ಯುತಿ ಬರುವ‌ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಗಲಾಟೆ ಮಾಡಿ ನ್ಯಾಯಾಲಯದ ‌ಆವರಣದಲ್ಲಿ ಅಶಾಂತಿ ವಾತಾವರಣ ನಿರ್ಮಿಸಿದ್ದರೆಂದು ಆರೋಪಿಸಿ ವಕೀಲರ ಸಂಘದ ಪ್ರತಿನಿಧಿಗಳು, ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್ ಅವರಿಗೆ ದೂರು ನೀಡಿದ್ದರು. ಅದೇ ದೂರು ಆಧರಿಸಿ ಪ್ರಕರಣ ದಾಖಲಾಗಿದೆ' ಎಂದೂ ತಿಳಿಸಿವೆ.

ADVERTISEMENT

ಜಗದೀಶ್ ಮಗ, ಇತರರ ಮೇಲೂ ಹಲ್ಲೆ: ನ್ಯಾಯಾಲಯದ ಆವರಣದಲ್ಲೇ ಜಗದೀಶ್ ಅವರ ಮಗ ಹಾಗೂ ಇತರರ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆಯೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.

'ನ್ಯಾಯಾಲಯದ ‌ಆವರದಲ್ಲಿ ಕಪ್ಪು ಕೋಟ್ ಧರಿಸಿದ್ದ ಕೆಲವರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ವಕೀಲ ಜಗದೀಶ್ ಜೊತೆ ನ್ಯಾಯಾಲಯಕ್ಕೆ ಬಂದಿದ್ದಾಗ ಈ‌ ಘಟನೆ ನಡೆದಿದ್ದು, ನಮಗಾದ ಗಾಯಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ ಎಂಬುದಾಗಿ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.