ADVERTISEMENT

ಅಕ್ರಮ ಬಡಾವಣೆ ತೆರವು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:19 IST
Last Updated 15 ಅಕ್ಟೋಬರ್ 2020, 5:19 IST
ಅಕ್ರಮವಾಗಿ ಅಭಿವೃದ್ಧಿಪಡಿಸಿದ್ದ ಬಡಾವಣೆಯಲ್ಲಿ ನಿರ್ಮಿಸಿರುವ ಚರಂಡಿ ತೆರವುಗೊಳಿಸುತ್ತಿರುವುದು
ಅಕ್ರಮವಾಗಿ ಅಭಿವೃದ್ಧಿಪಡಿಸಿದ್ದ ಬಡಾವಣೆಯಲ್ಲಿ ನಿರ್ಮಿಸಿರುವ ಚರಂಡಿ ತೆರವುಗೊಳಿಸುತ್ತಿರುವುದು   

ಬೆಂಗಳೂರು: ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿ ಅಗರ ಮತ್ತು ಬಿ.ಎಂ. ಕಾವಲು ಪ್ರದೇಶದಲ್ಲಿ ಅನಧಿಕೃತವಾಗಿ 14.38 ಎಕರೆಯಲ್ಲಿ ಅಭಿವೃದ್ಧಿಪಡಿಸಿದ್ದ ಬಡಾವಣೆಯನ್ನು ಜಿಲ್ಲಾಡಳಿತ ಬುಧವಾರ ತೆರವುಗೊಳಿಸಿದೆ.

ಎರಡೂ ಗ್ರಾಮ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಇರುವ 14 ಎಕರೆ 38 ಗುಂಟೆ ವಿಸ್ತೀರ್ಣದ ಕೃಷಿ ಜಮೀನಿನಲ್ಲಿ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಬಡಾವಣೆ ನಿರ್ಮಿಸುತ್ತಿದ್ದ ಕಾರಣ ತೆರವುಗೊಳಿಲಾಗಿದೆ ಎಂದು ತಹಶೀಲ್ದಾರ್ ಅದೇಶದಲ್ಲಿ ತಿಳಿಸಿದ್ದಾರೆ.

‘ರೂಪಾ ಅಶ್ವಥ್, ‌ಶಶಿಚಂದ್ರಶೇಖರಯ್ಯ, ಮಂಜು ಅಶ್ವತ್ಥ, ಛಾಯಾ ಅಶ್ವತ್ಥ ಎಂಬುವರ ಹೆಸರಿನಲ್ಲಿ ಕೃಷಿ ಜಮೀನಿದ್ದು, ಅದನ್ನು ಕೆಂಚಪ್ಪಗೌಡ ಎಂಬ ವ್ಯಕ್ತಿಗೆ ಮಾರಾಟ ಕರಾರು (ಜಿಪಿಎ) ಮಾಡಿಕೊಡಲಾಗಿದೆ. ಈ ಜಾಗದಲ್ಲಿ ಯಾವುದೇ ಪ್ರಾಧಿಕಾರದ ಅನುಮತಿ ಪಡೆಯದೇ ವಸತಿ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡುಲಾಗುತ್ತಿತ್ತು. ಈ ಸಂಬಂಧ ನೀಡಿದ ನೋಟಿಸ್‌ಗೆ ಉತ್ತರವನ್ನೂ ನೀಡದ ಕಾರಣ ಜಿಲ್ಲಾಧಿಕಾರಿ ವಿ. ಶಿವಮೂರ್ತಿ ಅವರ ನಿರ್ದೇಶನದಂತೆ ತೆರವುಗೊಳಿಸಲಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಉಪವಿಭಾಗಾಧಿಕಾರಿ ಡಾ. ಎಂ.ಜಿ. ಶಿವಣ್ಣ, ತಹಶೀಲ್ದಾರ್ ಶಿವಪ್ಪ ಲಮಾಣಿ ಮತ್ತು ಇತರ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆ ನಡೆಸಿತು. ನಿರ್ಮಾಣವಾಗಿದ್ದ ರಸ್ತೆ ಮತ್ತು ಚರಂಡಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

‘ನಿವೇಶನ ಖರೀದಿಸಿರುವ ಅಮಾಯಕರು ಸ್ಥಳೀಯ ಠಾಣೆ ಅಥವಾ ಸಕ್ಷಮ ಪ್ರಾಧಿಕಾರ ಸಂಪರ್ಕಿಸಿ ದೂರು ನೀಡಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.