ADVERTISEMENT

ಸುಳ್ಳು ದೂರು ನೀಡಿದರೆ ಕಾನೂನು ಕ್ರಮ: ಬೆಂಗಳೂರು ಪೊಲೀಸ್‌ ಕಮಿಷನರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 0:18 IST
Last Updated 19 ಫೆಬ್ರುವರಿ 2025, 0:18 IST
ಬಿ.ದಯಾನಂದ 
ಬಿ.ದಯಾನಂದ    

ಬೆಂಗಳೂರು: ‘ಸುಳ್ಳು ದೂರು ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ್ ಎಚ್ಚರಿಸಿದರು.

‘ನಗರ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ದೂರುಗಳ ಪೈಕಿ, ಆರು ಪ್ರಕರಣಗಳು ಸುಳ್ಳು ದೂರುಗಳು ಎಂಬುದು ತನಿಖೆಯಿಂದ ಗೊತ್ತಾಗಿದೆ. ಆ ರೀತಿಯ ಸುಳ್ಳು ನೀಡಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಈ ಆರು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಎರಡು ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶಿಕ್ಷೆ ಘೋಷಿಸಲಾಗಿದೆ. ಉಳಿದ ಎರಡು ಪ್ರಕರಣಗಳಲ್ಲಿ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ADVERTISEMENT

‘2022ರಲ್ಲಿ ಸಂಪಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು. ದೂರುದಾರರು ಸುಳ್ಳು ದೂರು ನೀಡಿದ್ದರು ಎಂಬುದು ತನಿಖೆಯಿಂದ ಸಾಬೀತಾಗಿತ್ತು. ಅದೇ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದಾಖಲಾಗಿದ್ದ ವಾಹನ ಕಳವು ಪ್ರಕರಣದ ತನಿಖೆ ವೇಳೆ ದೂರುದಾರರು ಸುಳ್ಳು ದೂರು ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.