ADVERTISEMENT

ಚೌಕಟ್ಟಿನಿಂದ ಕೃಷಿ ವಿಜ್ಞಾನಿಗಳು ಹೊರಬರಲಿ: ಕೃಷಿ ಸಚಿವ ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 21:13 IST
Last Updated 17 ನವೆಂಬರ್ 2020, 21:13 IST
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಭಾರತಿ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ ವಿವಿ ಕುಲಪತಿ ರಾಜೇಂದ್ರ ಪ್ರಸಾದ್ ಹಾಗೂ ಇತರರು ಇದ್ದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಭಾರತಿ ಹೆಗಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕೃಷಿ ವಿವಿ ಕುಲಪತಿ ರಾಜೇಂದ್ರ ಪ್ರಸಾದ್ ಹಾಗೂ ಇತರರು ಇದ್ದರು.   

ಬೆಂಗಳೂರು: 'ರೈತರು ಕೃಷಿಯಲ್ಲಿ ಸಮಸ್ಯೆ ಎದುರಾದಾಗ ಔಷಧ ಮತ್ತು ಗೊಬ್ಬರದ ಅಂಗಡಿಗಳಿಗೆ ಹೋಗುವುದು ನಿಲ್ಲಬೇಕು. ಕೃಷಿ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಇನ್ನು ಮುಂದೆ ಕೃಷಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳನ್ನು ನೇರವಾಗಿ ಭೇಟಿ ಮಾಡುವಂತಾಗಬೇಕು' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಮಂಗಳವಾರ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ 55ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

'ಕೃಷಿ ವಿಶ್ವವಿದ್ಯಾಲಯಗಳು ಗುಣಮಟ್ಟದ ತಳಿಗಳನ್ನು ಹೆಚ್ಚಾಗಿ ಹೊರತರಬೇಕು. ತಳಿಗಳನ್ನು ಪ್ರಚಾರ ರೈತರನ್ನು ತಲುಪಬೇಕು. ಕೃಷಿ ತಜ್ಞರೇ ಕೃಷಿಗೆ ವೈದ್ಯರಾಗಬೇಕು. ಕೃಷಿ ವಿಜ್ಞಾನಿಗಳು ಹಾಗೂ ಪ್ರಾಧ್ಯಾಪಕರು ವಿಶ್ವವಿದ್ಯಾಲಯದ ಚೌಕಟ್ಟಿನಿಂದ ಹೊರಬರಬೇಕು. ತಮ್ಮ ಕೃಷಿ ಜ್ಞಾನವನ್ನು ರೈತರಿಗೆ ಹಂಚುವ ಕೆಲಸ ಮಾಡಬೇಕು' ಎಂದು ಸೂಚಿಸಿದರು.

ADVERTISEMENT

'ಬಹುತೇಕ ಯುವಕರು ಕೃಷಿಯಿಂದ ದೂರ ಹೋಗುತ್ತಿದ್ದಾರೆ. ಕೃಷಿ ಕೀಳರಿಮೆಯ ಕೆಲಸವಲ್ಲ. ಹಿರಿಮೆಯ ಸ್ವಾಭಿಮಾನಿ ಕೆಲಸ ಎನ್ನುವುದನ್ನು ಅರಿಯಬೇಕು. ಪ್ರಾಧ್ಯಾಪಕರನ್ನು ತಾಲ್ಲೂಕಿನ ಸೇವೆಗೆ ನಿಯೋಜಿಸಲಾಗಿದ್ದು, ಗ್ರಾಮಗಳ ಭೇಟಿಗೂ ಮುನ್ನ ರೈತ ಸಂಪರ್ಕ ಕೇಂದ್ರಗಳಿಗೆ ಮಾಹಿತಿ ನೀಡಬೇಕು. ಇದರಿಂದ ರೈತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು'ಎಂದರು.

ವಿವಿಧ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಎಸ್.ಉಮಾ (ಕಾಳಯ್ಯ ಕೃಷ್ಣಮೂರ್ತಿ ಪ್ರಶಸ್ತಿ), ಎ.ಜಿ.ಶ್ರೀನಿವಾಸ್ (ನಾಗಮ್ಮ ದತ್ತಾತ್ರೇಯ ರಾವ್ ದೇಸಾಯಿ ಪ್ರಶಸ್ತಿ), ಭಾರತಿ ಹೆಗಡೆ ('ಮಣ್ಣಿನ ಗೆಳತಿ' ಪುಸ್ತಕಕ್ಕೆ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ), ಮಮತಾ ಎಚ್.ಎಸ್. (ಜುವಾರಿ ಇಂಡಸ್ಟ್ರೀಸ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ), ಎಂ.ಜಿ.ಚಂದ್ರಶೇಖರ್, ಚಿಕ್ಕಲಿಂಗಯ್ಯ ಹಾಗೂ ನರಸೇಗೌಡ (ಅತ್ಯುತ್ತಮ ಸೇವಾ ಸಿಬ್ಬಂದಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

'ಲ್ಯಾಬ್ ಟು ಲ್ಯಾಂಡ್ ವಾಹನ ಬಿಡುಗಡೆ'

'ಲ್ಯಾಬ್ ಟು ಲ್ಯಾಂಡ್' (ಪ್ರಯೋಗಾಲಯದಿಂದ ಮಣ್ಣಿಗೆ) ಮಣ್ಣಿನ ಪರೀಕ್ಷೆ ನಡೆಸುವ 'ಮೊಬೈಲ್ ಅಗ್ರಿ ಹೆಲ್ತ್' ವಾಹನವನ್ನು ಈ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುವುದು'ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

'ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 20 ರೈತ ಸಂಪರ್ಕ ಕೇಂದ್ರಗಳಿಗೆ ಈ ವಾಹನಗಳನ್ನು ಬಳಸಿಕೊಳ್ಳಲಾಗುವುದು. ಇದರಲ್ಲಿ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದಲ್ಲಿ ಕೃಷಿ ಪದವೀಧರರನ್ನು ಬಳಸಿಕೊಳ್ಳಲಾಗುವುದು' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.