ADVERTISEMENT

ನಕ್ಷೆ ನೀಡುವವರು ಅಕ್ರಮ ತಡೆಯಲಿ: ಯೋಜನೆ ಅಧಿಕಾರಿಗಳಿಗೇ ಜವಾಬ್ದಾರಿ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:20 IST
Last Updated 11 ಡಿಸೆಂಬರ್ 2025, 19:20 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ   

ಬೆಂಗಳೂರು: ಕಟ್ಟಡ ನಕ್ಷೆ ನೀಡುವುದು, ನಕ್ಷೆ ಉಲ್ಲಂಘಿಸಿ ನಿರ್ಮಾಣ ಮಾಡುವ ಪ್ರಕರಣ ಸೇರಿದಂತೆ ಅನಧಿಕೃತ ನಿರ್ಮಾಣದ ಮೇಲೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ನಗರ ಯೋಜನೆ ಇಲಾಖೆಯ ಅಧಿಕಾರಿಗಳಿಗೇ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ– ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದು, ಬಿಬಿಎಂಪಿ ಕಾಯ್ದೆ–2020 ವೃಂದ ನೇಮಕಾತಿ ನಿಯಮ, ಬಿಬಿಎಂಪಿ ಆಯುಕ್ತರ ಎಸ್‌ಒಪಿ ಆದೇಶ, ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕೋಡ್‌, ರಾಷ್ಟ್ರೀಯ ಕಟ್ಟಡ ಕೋಡ್‌–2016 ಅನ್ನು ಉಲ್ಲೇಖಿಸಿ, ಕ್ರಮ ಕೈಗೊಳ್ಳಲು ಮನವಿ ಮಾಡಿದೆ.

ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಮತ್ತು  ಯಾವುದೇ ರೀತಿಯ ನಕ್ಷೆ ಉಲ್ಲಂಘನೆ, ಅನಧಿಕೃತ ನಿರ್ಮಾಣದ ಪ್ರಕರಣಗಳಲ್ಲಿ ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ನಗರ ಯೋಜನೆ ವಿಭಾಗದ ಅಧಿಕಾರಿಗಳಿಗೇ ವಹಿಸಬೇಕು. ವಾರ್ಡ್‌ ಮಟ್ಟದ ಎಂಜಿನಿಯರ್‌ಗಳನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕು ಎಂದು ವಿನಂತಿಸಲಾಗಿದೆ.

ADVERTISEMENT

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಕಾರ್ಯಾಚರಣೆಯನ್ನು ಒಂದೇ ರೀತಿ ಇರುವಂತೆ ಮಾಡಬೇಕು. ತಾಂತ್ರಿಕ ಸಿಬ್ಬಂದಿಯನ್ನು ದಕ್ಷ ರೀತಿಯಲ್ಲಿ ಬಳಸಿಕೊಳ್ಳಬೇಕು. ವಿಭಾಗಗಳಲ್ಲಿನ ಕಾರ್ಯಗಳನ್ನು ಸಮತೋಲನವಾಗಿ ವಿಂಗಡಿಸಬೇಕು. ನಾಗರಿಕರಿಗೆ ಸೇವೆಯನ್ನು ವಿತರಿಸಲು ಕಾರ್ಯನಿರ್ವಹಣೆಯನ್ನು ಅಭಿವೃದ್ಧಿಗೊಳಿಸಬೇಕು. ವಾರ್ಡ್‌ ಮಟ್ಟದ ಎಂಜಿನಿಯರ್‌ಗಳ ವೃತ್ತಿಪರತೆಯನ್ನು ರಕ್ಷಿಸಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಬಿಬಿಎಂಪಿ ಕಾಯ್ದೆಗೆ ಮುನ್ನ, ಕಟ್ಟಡ ನಕ್ಷೆ, ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ಬಿ.ಇ ಪದವೀಧರರನ್ನು ಸಿವಿಲ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಬಿಬಿಎಂಪಿ–2020 ಕಾಯ್ದೆಯ ನಂತರ, ನಗರ ಯೋಜನೆ ವಿಭಾಗವನ್ನು ರಚಿಸಲಾಯಿತು. ಇದರಲ್ಲಿ ನಗರ ಯೋಜಕ, ಉಪ ನಗರ ಯೋಜಕ, ಜಂಟಿ ನಿರ್ದೇಶಕ, ಹೆಚ್ಚುವರಿ ನಿರ್ದೇಶಕ, ಮುಖ್ಯ ನಗರ ಯೋಜಕ ಎಂಬ ಹುದ್ದೆಗಳಿವೆ. 2022ರಲ್ಲಿ ಬಿಬಿಎಂಪಿ ಆಯುಕ್ತರು ಈ ವಿಭಾಗಕ್ಕೆ, ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಮತ್ತು ಅದರ ಉಲ್ಲಂಘನೆ ನಿಯಂತ್ರಣದ ಜವಾಬ್ದಾರಿಯನ್ನು ವಹಿಸಿ ಆದೇಶ ಹೊರಡಿಸಿದ್ದಾರೆ.

ಮೂರು ವರ್ಷಗಳಿಗೂ ಹೆಚ್ಚು ಕಾಲ ನಗರ ಯೋಜನೆ ವಿಭಾಗವೇ ಅನಧಿಕೃತ ನಿರ್ಮಾಣವನ್ನು ದಕ್ಷವಾಗಿ ನಿಯಂತ್ರಿಸುತ್ತಿದ್ದು, ಸ್ವತಂತ್ರವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ, ಆ ವಿಭಾಗಕ್ಕೆ ಎಲ್ಲ ಜವಾಬ್ದಾರಿಯನ್ನು ಐದು ನಗರ ಪಾಲಿಕೆಗಳಲ್ಲಿ ವಹಿಸಬೇಕು ಎಂದು ಸಂಘದ ಅಧ್ಯಕ್ಷ ಎ. ಅಮೃತ್‌ ರಾಜ್ ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಕೇಂದ್ರ ಪಾಲಿಕೆ ಹೊರತು ಪಡಿಸಿದಂತೆ, ಉಳಿದ ನಾಲ್ಕು ನಗರ ಪಾಲಿಕೆಗಳಲ್ಲಿ ಕಟ್ಟಡ ನಕ್ಷೆ ಮಂಜೂರು ಪ್ರಕ್ರಿಯೆಯನ್ನು ಹೊರತುಪಡಿಸಿ, ಉಳಿದೆಲ್ಲ ಅಕ್ರಮಗಳು, ಉಲ್ಲಂಘನೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ವಾರ್ಡ್‌ ಎಂಜಿನಿಯರ್‌ಗಳ ಮೇಲೆ ಹೊರಿಸಿ ಆದೇಶವನ್ನು ಹೊರಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.