ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಹ್ಲಾದ್ ರಾಮರಾವ್(ವಿಜ್ಞಾನ), ಅನಿವಾಸಿ ಭಾರತೀಯ ಅಮರನಾಥ ಗೌಡ(ಉದ್ಯಮ), ಕೆ.ಪಿ. ಗೋಪಾಲಕೃಷ್ಣ(ಶಿಕ್ಷಣ) ಅವರಿಗೆ ಪ್ರದಾನ ಮಾಡಲಾಯಿತು.
ಬೆಂಗಳೂರು: ‘ನಾಡಪ್ರಭು ಕೆಂಪೇಗೌಡರು ಸಹಿಷ್ಣುತೆ, ಸಮಭಾವನೆಯ ದೃಷ್ಟಿಯಿಂದ ಬೆಂಗಳೂರನ್ನು ನಿರ್ಮಾಣ ಮಾಡಿದ್ದು, ಅದನ್ನು ವಿಭಾಗ ಮಾಡಿ ಹರಿದು ಹಂಚಿ ಹೋಗದಂತೆ ರಕ್ಷಿಸುವ ಸಂಕಲ್ಪವನ್ನು ನಾವೆಲ್ಲ ಮಾಡಬೇಕು’ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ಶುಕ್ರವಾರ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡರ 516ನೇ ಜನ್ಮದಿನೋತ್ಸವ’ ಮತ್ತು ಅಂತರರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ ಹಾಗೂ ರಾಜ್ಯ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಐದು ಶತಮಾನಗಳ ಹಿಂದೆ ಕೆಂಪೇಗೌಡರು ಬೆಂಗಳೂರಿನಲ್ಲಿ 347 ಕೆರೆ ಕಟ್ಟಿಸಿ, ಮಳೆ ನೀರು ಸಂಗ್ರಹಿಸುವ ವಿಧಾನ ಅಳವಡಿಸಿ, ಹಸಿರು ಬೆಂಗಳೂರಿಗೆ ಅಡಿಪಾಯ ಹಾಕಿದ್ದರು. ಇಂಥ ನಗರವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ’ ಎಂದರು.
ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ‘ಬೆಂಗಳೂರು ನಿರ್ಮಿಸಿದ ಕೆಂಪೇಗೌಡರು ತಮಗಾಗಿ ಆಸ್ತಿ ಮಾಡಿಕೊಳ್ಳಲಿಲ್ಲ. ಈಗಿನವರು ಆಸ್ತಿ ಎಲ್ಲೆಲ್ಲಿದೆ ಎಂದು ನೋಡಿ, ನಗರವನ್ನು ನಾಲ್ಕೈದು ಭಾಗ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು’ ಎಂದರು.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ. ‘ಒಡೆಯಲಿ ಎಂದು ಕೆಂಪೇಗೌಡರು ಬೆಂಗಳೂರು ಕಟ್ಟಲಿಲ್ಲ. ಒಂದೊಮ್ಮೆ ಈಗ ಒಡೆದರೂ, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಒಟ್ಟುಗೂಡಿಸುತ್ತೇವೆ’ ಎಂದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈವಿಜಯೇಂದ್ರ, ‘ಬೆಂಗಳೂರು ನಗರವನ್ನು ಒಡೆಯುವ ಕೆಲಸವನ್ನು ಎಲ್ಲರೂ ಒಟ್ಟಾಗಿ ಹೋರಾಟ ಮಾಡಿ ತಡೆಯಬೇಕು’ ಎಂದು ತಿಳಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿದರು.
ಪ್ರಶಸ್ತಿ ಪ್ರದಾನ: ಮೂವರಿಗೆ 2025ನೇ ಸಾಲಿನ ‘ಅಂತರರಾಷ್ಟ್ರೀಯ ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ತಲಾ ₹2 ಲಕ್ಷ ನಗದು ಹಾಗೂ ಬೆಳ್ಳಿ ಪದಕ ಒಳಗೊಂಡಿದೆ. ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ₹ 25 ಸಾವಿರ ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.
ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಂಪೇಗೌಡ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಸ್ವಾಗತಿಸಿದರು. ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ವಿವಿಧ ಕ್ಷೇತ್ರಗಳ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.