ADVERTISEMENT

ಪತ್ನಿ ಸುಂದರವಾಗಿದ್ದಾಳೆಂದು ಆ್ಯಸಿಡ್ ಎರಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 21:31 IST
Last Updated 29 ಜುಲೈ 2022, 21:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪತ್ನಿ ಸುಂದರವಾಗಿದ್ದಾಳೆಂದು ಮೈ ಮೇಲೆ ಆ್ಯಸಿಡ್ ಎರಚಿ ಕೊಲೆ ಮಾಡಿದ್ದ ಅಪರಾಧಿ ಚನ್ನೇಗೌಡ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 46ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

2017ರಲ್ಲಿ ನಡೆದಿದ್ದ ಮಂಜುಳಾ ಎಂಬುವರ ಕೊಲೆ ಸಂಬಂಧ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾ
ಗಿತ್ತು. ನ್ಯಾಯಾಧೀಶರಾದ ಮಂಜುನಾಥ್ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ಲತಾ ವಾದಿಸಿದ್ದರು.

‘ಅಪರಾಧಿ ಚನ್ನೇಗೌಡ ಹಾಗೂ ಮಂಜುಳಾ 1996ರಲ್ಲಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಸನ್ಯಾಸಿ ಕ್ವಾರ್ಟರ್ಸ್‌ನಲ್ಲಿ ಕುಟುಂಬ ವಾಸವಿತ್ತು. ಪತ್ನಿ ಜೊತೆ ನಿತ್ಯವೂ ಜಗಳ ಮಾಡಲಾರಂಭಿಸಿದ್ದ ಚನ್ನೇಗೌಡ, ‘ನೀನು ಸುಂದರವಾಗಿದ್ದೀಯ, ಪರಪುರುಷನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯ’ ಎಂದು ಅನುಮಾನಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ನಿನ್ನ ಸೌಂದರ್ಯವನ್ನೇ ಹಾಳು ಮಾಡುತ್ತೇನೆ. ಆಗ ನಿನ್ನನ್ನು ಯಾವ ಪುರುಷನೂ ನೋಡುವುದಿಲ್ಲ’ ಎಂದು ಚನ್ನೇ
ಗೌಡ ಬೆದರಿಕೆ ಹಾಕಿದ್ದ. ಅದರಂತೆ ಪರಿಚಯಸ್ಥ ಕುಮಾರೇಶ್ ಮೂಲಕ ಆ್ಯಸಿಡ್ ಖರೀದಿಸಿದ್ದ ಆರೋಪಿ, 2017ರ ಜುಲೈ 14ರಂದು ಪತ್ನಿ ಮಂಜುಳಾ ಮೈ ಮೇಲೆ ಎರಚಿದ್ದ. ತೀವ್ರ ಗಾಯಗೊಂಡಿದ್ದ ಮಂಜುಳಾ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದರು. ಪತಿಯನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.